ಹೊಸದಿಗಂತ ವರದಿ ಮಡಿಕೇರಿ:
ಹಾಲು ತರಲೆಂದು ತೆರಳುತ್ತಿದ್ದ ವೃದ್ಧನ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬುಧವಾರ ಬೆಳ್ಳಂಬೆಳಗ್ಗೆ ನಡೆದಿದೆ.
ವೀರಾಜಪೇಟೆ ಹೊರವಲಯದ ಕಡಂಗಮರೂರು ಗ್ರಾಮದ ಅಮ್ಮಂಡ ಸುಬ್ರಮಣಿ (75) ಕಾಡಾನೆ ದಾಳಿಗೆ ಒಳಗಾಗಿ ಗಾಯಗೊಂಡ ವೃದ್ಧ. ಬುಧವಾರ ಬೆಳಗ್ಗೆ 7ಗಂಟೆಗೆ ಹಾಲು ತರಲೆಂದು ಮನೆ ಸಮೀಪದ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಗ್ರಾಮದ ಭದ್ರಕಾಳಿ ದೇವಾಲಯದ ಬಳಿ ಕಾಡಾನೆ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.
ಈ ಸಂದರ್ಭ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
