Diabetes In Children | ಮಕ್ಕಳಲ್ಲಿ ಮಧುಮೇಹದ ಲಕ್ಷಣಗಳು ಯಾವ ರೀತಿ ಇರುತ್ತದೆ! ಪೋಷಕರು ತಿಳಿದುಕೊಳ್ಳಬೇಕಾದ ಮುಖ್ಯ ಮಾಹಿತಿ ಇದು

ಮಧುಮೇಹ ಎಂಬುದು ಕೇವಲ ವಯಸ್ಕರಲ್ಲಿ ಮಾತ್ರವಲ್ಲ, ಮಕ್ಕಳಲ್ಲಿಯೂ ಕಾಣಿಸಿಕೊಳ್ಳಬಹುದಾದ ಒಂದು ಗಂಭೀರ ಆರೋಗ್ಯ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಅಸಮತೋಲಿತ ಜೀವನ ಶೈಲಿ, ಆನುವಂಶಿಕ ಕಾರಣಗಳು ಹಾಗೂ ಆಹಾರದ ಅಭ್ಯಾಸಗಳು ಮಕ್ಕಳಲ್ಲಿ ಮಧುಮೇಹದ ಪ್ರಕರಣಗಳನ್ನು ಹೆಚ್ಚಿಸುತ್ತಿವೆ.

ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅಥವಾ ಪೂರಕ ಪ್ರಮಾಣದಲ್ಲಿ ಉತ್ಪಾದನೆ ಆಗದಿದ್ದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರಿಕೆಯಾಗುತ್ತದೆ. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪೋಷಕರು ಈ ರೋಗವನ್ನು ಪ್ರಾರಂಭದಲ್ಲೇ ಗುರುತಿಸಿ ಕ್ರಮ ಕೈಗೊಂಡರೆ ಮಗುವಿನ ಆರೋಗ್ಯವನ್ನು ಕಾಪಾಡಬಹುದು.

ಮಧುಮೇಹದಿಂದ ಬಳಲುತ್ತಿರುವ ಮಕ್ಕಳಲ್ಲಿ ಕಾಣುವ ಕೆಲವು ಸಾಮಾನ್ಯ ಲಕ್ಷಣಗಳು ವಯಸ್ಕರಲ್ಲಿಯೂ ಕಂಡುಬರುವಂತೆಯೇ ಇರುತ್ತವೆ. ಪ್ರಮುಖವಾಗಿ ತೂಕದಲ್ಲಿ ತೀವ್ರ ಕುಸಿತವು ಪ್ರಮುಖ ಸೂಚನೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದ ಮಕ್ಕಳು ಸದಾ ಹಸಿವಿನಿಂದ ಬಳಲುತ್ತಾರೆ. ಊಟ ಮಾಡಿದ ನಂತರವೂ ತೃಪ್ತಿ ಸಿಗದೆ ಹಸಿವು ಹೆಚ್ಚಾಗುತ್ತದೆ.

ಇದೇ ರೀತಿ, ಹೆಚ್ಚು ಬಾಯಾರಿಕೆ ಕಾಣಿಸಿಕೊಳ್ಳುವುದು ಮತ್ತೊಂದು ಲಕ್ಷಣ. ಮಕ್ಕಳು ನಿರಂತರವಾಗಿ ನೀರು ಕುಡಿಯಲು ಬಯಸಿದರೆ ಅದನ್ನು ನಿರ್ಲಕ್ಷಿಸಬಾರದು. ಕೆಲವೊಮ್ಮೆ ದೃಷ್ಟಿ ಮಸುಕಾಗುವುದು, ಸ್ಪಷ್ಟವಾಗಿ ಕಾಣದಿರುವುದು ಸಹ ಮಧುಮೇಹದ ಸೂಚನೆ ಆಗಬಹುದು.

ಮಕ್ಕಳ ಚರ್ಮದಲ್ಲೂ ಬದಲಾವಣೆಗಳು ಕಾಣಿಸಬಹುದು. ವಿಶೇಷವಾಗಿ ಕುತ್ತಿಗೆ, ಕಂಕುಳು, ತೊಡೆ ಇವುಗಳ ಸುತ್ತ ಕಪ್ಪಾದ ಚರ್ಮದ ಪಟ್ಟೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಜೊತೆಗೆ ದದ್ದುಗಳು, ಒಣ ಚರ್ಮ, ಎಸ್ಜಿಮಾ, ಸಣ್ಣ ಉಬ್ಬುಗಳು ಇತ್ಯಾದಿ ಸಮಸ್ಯೆಗಳು ಕಾಣಿಸಬಹುದು.

ಮಕ್ಕಳಲ್ಲಿ ಮಧುಮೇಹವನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸುವುದು ಅತ್ಯಂತ ಅಗತ್ಯ. ತೂಕದ ತೀವ್ರ ಕುಸಿತ, ನಿರಂತರ ಹಸಿವು, ಹೆಚ್ಚಾದ ಬಾಯಾರಿಕೆ, ದೃಷ್ಟಿ ಸಮಸ್ಯೆಗಳು ಹಾಗೂ ಚರ್ಮದ ಬದಲಾವಣೆಗಳು ಪೋಷಕರಿಗೆ ಎಚ್ಚರಿಕೆಯ ಸಂಕೇತ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಮಗುವಿನ ಆರೋಗ್ಯ ರಕ್ಷಣೆಗಾಗಿ ಮುಖ್ಯ. ಸಮಯಕ್ಕೆ ತಕ್ಕ ನಿರ್ವಹಣೆ ಮತ್ತು ಆಹಾರ ನಿಯಂತ್ರಣದಿಂದ ಮಧುಮೇಹವನ್ನು ನಿಯಂತ್ರಿಸಿ, ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!