ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರಲ್ಲಿ ಬಿಡುಗಡೆಗೊಂಡು ರಾಷ್ಟ್ರಮಟ್ಟದಲ್ಲಿ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಹಿರಿಯ ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯಾಘಾತವೇ ಅವರ ಸಾವಿಗೆ ಕಾರಣವೆಂದು ಮೂಲಗಳಿಂದ ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪೆರ್ಡೂರು ಮೂಲದವರಾದ ಟಿ. ಪ್ರಭಾಕರ್ ಅವರು ಚಿತ್ರದಲ್ಲಿ ನ್ಯಾಯವಾದಿಯ ಪಾತ್ರದಲ್ಲಿ ಅಭಿನಯಿಸಿದ್ದರು. ಸಾಹಸ ಹಾಗೂ ತಾತ್ವಿಕತೆಯಿಂದ ಕೂಡಿದ್ದ ಈ ಸಿನಿಮಾದಲ್ಲಿ ಅವರಿಗೆ ಸಣ್ಣ ಪಾತ್ರವಿದ್ದರೂ, ಅವರು ಅಭಿನಯಿಸಿದ್ದ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದಿತ್ತು. ಪ್ರಭಾಕರ್ ಅವರು ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲಸ ಮಾಡಿದ್ದು ಬಳಿಕ ನಿವೃತ್ತಿ ಹೊಂದಿದ್ದರು.
ರಂಗಭೂಮಿಯ ಕುರಿತಂತೆ ಅವರಿಗೆ ಅಪಾರ ಆಸಕ್ತಿ ಇದ್ದು, ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಕಾಂತಾರ’ ಚಿತ್ರದ ಚಿತ್ರೀಕರಣದ ಅವಧಿಯಲ್ಲಿ ಅವರು ಒಂದೂವರೆ ವರ್ಷ ಗಡ್ಡ ಶೇವ್ ಮಾಡದೆ ತಮ್ಮ ಪಾತ್ರಕ್ಕೆ ಸಂಬಂಧಿಸಿದಂತೆ ತಯಾರಿ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಟಿ. ಪ್ರಭಾಕರ್ ಪತ್ನಿ ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.