ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಸಂಸತ್ ಭವನದ ಆರು ದ್ವಾರಗಳಲ್ಲಿ ಒಂದಾದ ಗಜ ದ್ವಾರದ ಬಳಿ ಇರುವ ಟ್ಯಾಬೆಬುಯಾ ಅರ್ಜೆಂಟಿಯಾ ಮರವೊಂದು ಭದ್ರತೆಗೆ ಭಾರೀ ಸವಾಲಾಗಿದೆ. ಹೀಗಾಗಿ ಈ ಮರವನ್ನು ವಿಶೇಷ ರಕ್ಷಣಾ ತಂಡ (ಎಸ್‌ಪಿಜಿ) ಗುರುತಿಸಿದ್ದು, ಮರವನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಿದೆ.
ಅಧಿಕೃತ ಮಾಹಿತಿ ಪ್ರಕಾರ, ನಂಬರ್ 01 ಎಂದು ಗುರುತಿಸಲಾದ ಮರವು ವಿವಿಐಪಿ ಮಾರ್ಗದಲ್ಲಿ ಸಂಭಾವ್ಯ ಭದ್ರತಾ ಅಡಚಣೆಯನ್ನು ಉಂಟುಮಾಡುತ್ತಿದೆ ಎಂದು ಎಸ್‌ಪಿಜಿ ಹೇಳಿದೆ. ಇದಕ್ಕಾಗಿ ಮರವನ್ನು ಬೇರೆಡೆಗೆ ಸ್ಥಳಾಂತರಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಅರಣ್ಯ ಇಲಾಖೆಯಿಂದ ಅನುಮೋದನೆ ಕೋರಿದೆ.
ಸ್ಥಳಾಂತರ ಮಾಡಲಾಗುವ ಮರವನ್ನು ರಾಷ್ಟ್ರೀಯ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳಿರುವ (ಪ್ರೇರಣಾ ಸ್ಥಳ) ಸಂಸತ್ತಿನ ಸಂಕೀರ್ಣದೊಳಗೆ ನೆಡಲಾಗುತ್ತದೆ. ಸರಿಸುಮಾರು ಏಳು ವರ್ಷ ಹಳೆಯದಾದ ಈ ಮರ, ಕನಿಷ್ಠ ಆರೈಕೆ ಮತ್ತು ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲೂ ಚೆನ್ನಾಗಿ ಬೆಳೆಯಲಿದೆ.
ಸಿಪಿಡಬ್ಲ್ಯೂಡಿ ಈಗಾಗಲೇ ಅರಣ್ಯ ಇಲಾಖೆಗೆ 57,000 ರೂ. ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನೂ ಪಾವತಿಸಿದೆ. ಇನ್ನೂ ನೆಟ್ಟ ಸಸಿಗಳ ಜಿಯೋ-ಟ್ಯಾಗಿಂಗ್, ಏಳು ವರ್ಷಗಳವರೆಗೆ ಅವುಗಳ ನಿರ್ವಹಣೆ ಮತ್ತು ವಾರ್ಷಿಕ ಪ್ರಗತಿ ವರದಿಗಳನ್ನು ಸಲ್ಲಿಸುವುದು ಸಹ ಮರ ಸ್ಥಳಾಂತರದ ನಿಯಮದ ಅಡಿ ಬರುತ್ತದೆ.
ಹೊಸ ಸಂಸತ್ ಭವನದ ಆರು ದ್ವಾರಗಳಲ್ಲಿ ಒಂದಾದ ಗಜ ದ್ವಾರವನ್ನು ಪ್ರಯಾಣಿಸಲು ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಾಗಿ ಬಳಸುತ್ತಾರೆ.