ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಬೈರತಿ ಸುರೇಶ್ ಅವರೊಂದಿಗೆ ಸ್ಕೂಟರ್ ಏರಿ ಸಂಚರಿಸಿದ್ದು ಭಾರೀ ಸುದ್ದಿಯಾಗಿತ್ತು. ಆದರೆ, ಇದೀಗ ಅವರು ಓಡಿಸಿದ ಸ್ಕೂಟರ್ ಮೇಲೆಯೇ ಬರೋಬ್ಬರಿ 18,500 ರೂಪಾಯಿ ದಂಡ ಬಾಕಿ ಇರುವುದು ಬಹಿರಂಗವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೆಬ್ಬಾಳ ಮೇಲ್ಸೇತುವೆ ಪರಿಶೀಲನೆ ವೇಳೆ, ಸಂಚಾರ ದಟ್ಟಣೆಯನ್ನು ತಪ್ಪಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಬೈರತಿ ಸುರೇಶ್ ಅವರು ಸ್ಕೂಟರ್‌ನಲ್ಲಿ ಪ್ರಯಾಣಿಸಿದ್ದರು. ಆದರೆ, ಅವರು ಚಲಾಯಿಸಿದ ಸ್ಕೂಟರ್ ಈ ಹಿಂದೆ ಬರೋಬ್ಬರಿ 34 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್ ಸೇರಿದಂತೆ ಹಲವು ಪ್ರಕರಣಗಳು ಈ ವಾಹನದ ಮೇಲೆ ದಾಖಲಾಗಿದ್ದು, ಒಟ್ಟು ₹18,500 ದಂಡ ಪಾವತಿಸುವುದು ಬಾಕಿ ಇದೆ ಎಂದು ಸಂಚಾರ ಪೊಲೀಸ್ ಇಲಾಖೆಯ ದತ್ತಾಂಶಗಳಿಂದ ತಿಳಿದುಬಂದಿದೆ.
ಬೆಂಗಳೂರು ನಗರದಾದ್ಯಂತ ನಡೆಯುತ್ತಿದ್ದ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡುವುದಕ್ಕೆ ಹೊರಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಬೈರತಿ ಸುರೇಶ್ ಅವರು ನಿನ್ನೆ ಐಎಸ್‌ಐ ಮಾರ್ಕ್ ಇಲ್ಲದ, ಗುಣಮಟ್ಟವಲ್ಲದ ಹೆಲ್ಮೆಟ್ ಧರಿಸಿ ನಿಯಮ ಉಲ್ಲಂಘಿಸಿದ್ದಾರೆ. ಅಷ್ಟೇ ಅಲ್ಲ, ಅವರ ಹಿಂದೆಯೇ ಮತ್ತೊಂದು ಸ್ಕೂಟರ್‌ನಲ್ಲಿ ಬರುತ್ತಿದ್ದ ಶಾಸಕ ಎನ್.ಎ. ಹ್ಯಾರೀಸ್ ಅವರು ಹೆಲ್ಮೆಟ್ ಧರಿಸದೆಯೇ ಸವಾರಿ ಮಾಡಿರುವುದು ವಿಡಿಯೋಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಈ ರೀತಿ ನಿಯಮಗಳನ್ನು ಗಾಳಿಗೆ ತೂರಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.