ಹೊಸ ದಿಗಂತ ಆನ್ಲೈನ್ ಡೆಸ್ಕ್:
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ದಿಢೀರ್ ಕೇರಳ ಭೇಟಿ ‘ದೇವರ ನಾಡಿನ’ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡು ಜಿಲ್ಲೆ, ಸ್ಮೃತಿ ಪ್ರವಾಸದ ಕೇಂದ್ರ ಬಿಂದು ಆಗಿರುವುದು ಇನ್ನಷ್ಟು ಅಚ್ಚರಿ ಹುಟ್ಟುಹಾಕಿದೆ.
ಮಂಗಳವಾರ ಒಟ್ಟು ಏಳು ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವೆ ಪಾಲ್ಗೊಳ್ಳುತ್ತಿದ್ದು, ಒನ್ ಸ್ಟಾಪ್ ಸೆಂಟರ್, ಮರವಯಲ್ ಬುಡಕಟ್ಟು ವಸಾಹತು, ಪೊನ್ನಾಡ ಅಂಗನವಾಡಿ , ವರದೂರು ಸ್ಮಾರ್ಟ್ ಅಂಗನವಾಡಿಗಳಿಗೆ ಭೇಟಿ ಇದರಲ್ಲಿ ಸೇರಿವೆ.
ರಾಜಧಾನಿ ತಿರುವನಂತಪುರಂನಿಂದ 450 ಕಿ.ಮೀ. ದೂರದಲ್ಲಿರುವ ವಯನಾಡ್, ಗುಡ್ಡಗಾಡು ಜಿಲ್ಲೆಯಾಗಿದ್ದು 2018ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಅಡಿಯಲ್ಲಿ ಬರುವ 112 ಜಿಲ್ಲೆಗಳಲ್ಲಿ ಇದೂ ಒಂದಾಗಿದೆ.
ಒಂದೆಡೆ ಸ್ಮೃತಿ ಅವರ ವಯನಾಡ್ಗೆ ಭೇಟಿ ಅಲ್ಲಿನ ಬುಡಕಟ್ಟು ವಸಾಹತುಗಳ ಸ್ಥಿತಿಯ ಮೌಲ್ಯಮಾಪನಕ್ಕಾಗಿದ್ದು, ಕೇಂದ್ರದಿಂದ ನೀಡಲಾದ ಪ್ರಯೋಜನಗಳು ಅವರಿಗೆ ತಲುಪುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳುವುದಾಗಿದೆ. ಇದರಲ್ಲಿ ಯಾವುದೇ ‘ರಾಜಕೀಯ’ ಉದ್ದೇಶ ಇಲ್ಲ ಎಂದು ಪಕ್ಷದ ಮೂಲಗಳು ಹೇಳಿದ್ದರೆ, ಇನ್ನೊಂದೆಡೆ 2019  ರಲ್ಲಿ ಅಮೇಥಿ ಭದ್ರಕೋಟೆಯಲ್ಲಿ ಪರಾಭವಗೊಳಿಸಿದ ಬಳಿಕ ಅವರು ಇಲ್ಲೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಠಕ್ಕರ್ ನೀಡಲಿದ್ದಾರೆಯೇ ಎಂಬ ಬಗ್ಗೆ ಬಿರುಸಿನ ಚರ್ಚೆಗಳು ಆರಂಭವಾಗಿದೆ.

