ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಗೆ ಸರ್ಕಾರ ಅನುಮತಿ ನೀಡದಂತೆ ಸ್ವಾಮಿ ಭದ್ರಾನಂದ ಒತ್ತಾಯ

ಹೊಸದಿಗಂತ ವರದಿ ಮಂಗಳೂರು: 

ಕಲಬುರಗಿಯ ಪ್ರಣವಾನಂದ ಸ್ವಾಮೀಜಿ ಅವರು ಜ.6ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಸರಕಾರ ಅನುಮತಿ ಮತ್ತು ಅವಕಾಶ ನೀಡಬಾರದು ಎಂದು ಕೇರಳ ಮೂಲದ ಸ್ವಾಮಿ ಭದ್ರಾನಂದ ಒತ್ತಾಯಿಸಿದ್ದಾರೆ.

ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ಪ್ರಣವಾನಂದ ಅವರು ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆಯ ಬೇಡಿಕೆಗಳಲ್ಲಿ ಬಿಲ್ಲವರಿಗೆ ಶೇಂದಿ ಇಳಿಸಲು ಅವಕಾಶ ನೀಡಬೇಕು ಎಂಬುದು ಸೇರಿದೆ. ನಾರಾಯಣಗುರುಗಳು ಮದ್ಯಪಾನದ ವಿರೋಧಿಯಾಗಿದ್ದರು. ಪ್ರಣವಾನಂದ ಅವರಿಗೂ ನಾರಾಯಣಗುರುಗಳಿಗೂ ಯಾವುದೇ ಸಂಬಂಧ ಇಲ್ಲ. ಈ ಪಾದಯಾತ್ರೆ ಬಿಲ್ಲವರನ್ನು, ಸಮಾಜವನ್ನು ಮೋಸಗೊಳಿಸುವ ಪ್ರಯತ್ನವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಬಿಲ್ಲವರಿಗೆ ಶೇಂದಿ ಇಳಿಸಲು ಅವಕಾಶ ನೀಡಬೇಕು ಎಂಬುದು ಸರಿಯಲ್ಲ. ಪಾದಯಾತ್ರೆ ಹಿಂದೆ ಹಿಡನ್ ಅಜೆಂಡಾ ಇದೆ. ನಾರಾಯಣಗುರುಗಳ ನೈಜ ಅನುಯಾಯಿಗಳು ಈ ಪಾದಯಾತ್ರೆಯನ್ನು ಬೆಂಬಲಿಸಬಾರದು. ಸಮಾಜದಲ್ಲಿ ನಿರುದ್ಯೋಗ, ಕೃಷಿಕರ ಸಮಸ್ಯೆಗಳು, ಶಿಕ್ಷಣದಿಂದ ವಂಚಿತರಾಗಿರುವವರ ಅನೇಕ ಸಮಸ್ಯೆಗಳಿವೆ. ಅದರ ಬಗ್ಗೆ ಹೋರಾಟ ನಡೆಸಬೇಕಿತ್ತು. ಮದ್ಯ ನಿಷೇಧಕ್ಕೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದರೆ ಅದಕ್ಕೆ ಅರ್ಥವಿರುತ್ತಿತ್ತು. ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ ಆಟವಾಡಲಾಗುತ್ತಿದೆ ಎಂದು ಅವರು ಹೇಳಿದರು.

ಸನ್ಯಾಸಿಗಳು ಸಂಸಾರಿಗಳಾಗಿ ಮಕ್ಕಳನ್ನು ಪಡೆಯಬೇಕು ಎಂಬ ಪ್ರಣವಾನಂದ ಸ್ವಾಮೀಜಿ ಅವರ ನಿಲುವೂ ಸರಿಯಲ್ಲ. ಆತ ವಂಚಕ. ಆತನ ಹಿನ್ನೆಲೆಯನ್ನು ಎಲ್ಲರೂ ತಿಳಿಯಬೇಕು. ಮಂಗಳೂರಿನ ಜನತೆ ಧಾರ್ಮಿಕ ಪ್ರಜ್ಞೆ ಉಳ್ಳವರು. ಧರ್ಮವನ್ನು ನಾಶಮಾಡಲು ಹೊರಟಿರುವವರಿಗೆ ಇಲ್ಲಿನ ಜನತೆ ಅವಕಾಶ ನೀಡುವುದಿಲ್ಲ ಎಂದು ನಂಬಿದ್ದೇನೆ. ನಾರಾಯಣ ಗುರುಗಳ ಅನುಯಾಯಿಗಳು ಪಾದಯಾತ್ರೆಯನ್ನು ಬೆಂಬಲಿಸಬಾರದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!