ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸಾಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡು ಈಗ 50 ಕೋಟಿ ಕ್ಲಬ್ಗೆ ಸೇರುವ ಮೂಲಕ ಕನ್ನಡ ಚಿತ್ರರಂಗದ ಗರ್ವವನ್ನೇ ಹೆಚ್ಚಿಸಿದೆ. ಇದೇ ಚಿತ್ರದ ಮೂಲಕ ಮೊದಲ ನಿರ್ದೇಶನ ಮಾಡಿರುವ ಜೆಪಿ ತುಮಿನಾಡ ತಮ್ಮ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದ್ದಾರೆ.
ಸಮಾಜಮುಖಿ ಸಂದೇಶವನ್ನೊಳಗೊಂಡ ಈ ಚಿತ್ರವು ಪ್ರಾರಂಭದಲ್ಲಿ ಅತ್ಯಂತ ಕಡಿಮೆ ಕಲೆಕ್ಷನ್ ನೊಂದಿಗೆ ತೆರೆಕಂಡರೂ, ಬಾಕ್ಸಾಫೀಸ್ನಲ್ಲಿ ದಿನದಿಂದ ದಿನಕ್ಕೆ ಯಶಸ್ಸು ಕಂಡಿತು. ಜುಲೈ 25ರಂದು ಬಿಡುಗಡೆಯಾದಾಗ ಕೇವಲ 78 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದ ಈ ಚಿತ್ರ, ತದನಂತರ ಪ್ರತಿ ದಿನ ಸರಾಸರಿ 3 ಕೋಟಿ ರೂಪಾಯಿ ಗಳಿಸುತ್ತಾ ಮುಂದುವರಿಯಿತು. ಆಗಸ್ಟ್ 6ರಂದು ಮಾತ್ರವೂ ಈ ಚಿತ್ರ ಸುಮಾರು 2.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದು ಗಮನಾರ್ಹವಾಗಿದೆ.
ಪ್ರಸ್ತುತ ಈ ಚಿತ್ರದ ಒಟ್ಟಾರೆ ಕಲೆಕ್ಷನ್ 55 ಕೋಟಿ ರೂಪಾಯಿಯನ್ನು ದಾಟಿದೆ ಎಂದು ವರದಿಗಳು ಹೇಳಿವೆ. ಈ ಪೈಕಿ 50 ಕೋಟಿ ರೂಪಾಯಿ ಕೇವಲ ಕನ್ನಡ ಭಾಷೆಯ ಪ್ರದರ್ಶನದಿಂದ ಬಂದಿದೆ. ವಿದೇಶಗಳಲ್ಲಿ 4 ಕೋಟಿ ರೂಪಾಯಿ ಹಾಗೂ ಮಲಯಾಳಂ ಭಾಷೆಯಲ್ಲಿ 1.35 ಕೋಟಿ ರೂಪಾಯಿ ಆದಾಯವಾಗಿದೆ.
‘ಸು ಫ್ರಮ್ ಸೋ’ ಸಿನಿಮಾವನ್ನು ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಲವು ಮಂದಿ ಎರಡಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. ಚಿತ್ರಕ್ಕೆ ಸಿಕ್ಕ ಪ್ರಚಾರದಿಂದ ಟಿಕೆಟ್ಗಳ ಅಲಭ್ಯತೆಯೂ ಕಂಡುಬಂದಿದೆ. ಈ ಮೂಲಕ ನಿರ್ಮಾಪಕರು ದೊಡ್ಡ ಲಾಭ ಗಳಿಸಿದಷ್ಟೇ ಅಲ್ಲದೆ, ಅನೇಕ ಕಲಾವಿದರ ವೃತ್ತಿ ಜೀವನಕ್ಕೂ ಹೊಸ ಬೆಳಕು ತಂದಿದೆ.
ಚಿತ್ರದ ಒಟಿಟಿ ಮತ್ತು ಟಿವಿ ಹಕ್ಕುಗಳ ಮಾರಾಟದ ಕುರಿತು ಮಾತುಕತೆ ನಡೆಯುತ್ತಿದ್ದು, ಥಿಯೇಟರ್ನಲ್ಲಿ ಇನ್ನೂ ಯಶಸ್ವಿಯಾಗಿ ಓಡುತ್ತಿರುವ ಕಾರಣ, ಸದ್ಯದಲ್ಲೇ ಡಿಜಿಟಲ್ ರಿಲೀಸ್ ಮಾಡೋದಿಲ್ಲ ಎನ್ನಲಾಗಿದೆ.