Slow Jogging | ನಿಧಾನವಾಗಿ ಜಾಗಿಂಗ್‌ ಮಾಡೋದ್ರಿಂದ ಹಲವು ಪ್ರಯೋಜನಗಳಿವೆ!

ಬೆಳಗಿನ ತಾಜಾ ಗಾಳಿಯಲ್ಲಿ ನಿಧಾನವಾಗಿ ಜಾಗಿಂಗ್ ಮಾಡುವುದು ಕೇವಲ ವ್ಯಾಯಾಮವಲ್ಲ, ದೇಹ-ಮನಸ್ಸಿಗೆ ಉತ್ಸಾಹ ತುಂಬುವ ಚಟುವಟಿಕೆಯಾಗಿದೆ. ವೇಗವಾಗಿ ಓಡಲು ಸಾಧ್ಯವಿಲ್ಲದವರು ಅಥವಾ ತೀವ್ರ ವ್ಯಾಯಾಮಕ್ಕೆ ಒಗ್ಗಿಕೊಳ್ಳದವರು ನಿಧಾನ ಜಾಗಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ. ಇದು ನಡೆಯುವುದಕ್ಕಿಂತ ಹೆಚ್ಚು ಪ್ರಯೋಜನ ನೀಡುವುದಲ್ಲದೆ ತೂಕ ಇಳಿಕೆ, ಹೃದಯದ ಆರೋಗ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ.

ನಿಧಾನ ಜಾಗಿಂಗ್ ಮಾಡುವುದರಿಂದ ಚಯಾಪಚಯ ಕ್ರಿಯೆ ವೇಗವಾಗಿ ನಡೆಯುತ್ತದೆ. ಇದರಿಂದ ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕರಗಲು ಸಹಕಾರಿಯಾಗುತ್ತದೆ. ಹೃದಯರೋಗ, ಮಧುಮೇಹ, ಹೈ ಬಿಪಿ ಮುಂತಾದ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ. ಜಾಗಿಂಗ್ ಮಾಡುವ ಸಮಯದಲ್ಲಿ ಎಂಡಾರ್ಫಿನ್ ಹಾರ್ಮೋನುಗಳ ಉತ್ಪಾದನೆ ಹೆಚ್ಚಾಗುತ್ತದೆ, ಇದು ಒತ್ತಡ ಹಾಗೂ ಆತಂಕವನ್ನು ತಗ್ಗಿಸುತ್ತದೆ.

15 ಸೆಕೆಂಡುಗಳಲ್ಲಿ ಕನಿಷ್ಠ 50 ಅಡಿ ದೂರ ನಿಧಾನ ಜಾಗಿಂಗ್ ಮಾಡುವುದು ಶ್ವಾಸಕೋಶ ಹಾಗೂ ಸ್ನಾಯುಗಳ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿದಂತೆ ದೇಹಕ್ಕೆ ಹೆಚ್ಚಿನ ಆಮ್ಲಜನಕ ಲಭಿಸಿ ಶಕ್ತಿಯು ಹೆಚ್ಚುತ್ತದೆ. ಕೀಲು ನೋವು ಇಲ್ಲದವರು, ಮಧ್ಯಮ ಫಿಟ್ನೆಸ್ ಹೊಂದಿರುವವರು ಈ ವ್ಯಾಯಾಮದಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ.

ಜಾಗಿಂಗ್ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿತವಾಗಿರುತ್ತದೆ. ರಕ್ತಪ್ರಸರಣ ವ್ಯವಸ್ಥೆ ಸುಧಾರಿಸಿ ಹೃದಯಕ್ಕೆ ಸಮರ್ಪಕ ರಕ್ತ ಹರಿವು ದೊರೆಯುತ್ತದೆ. ಹೃದಯಾಘಾತ ಹಾಗೂ ಹೃದಯಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ. ಜೊತೆಗೆ ಮೂಳೆ ಬಲ ಹೆಚ್ಚಿಸಲು ಮತ್ತು ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಬೆನ್ನುಮೂಳೆ, ತೊಡೆ ಹಾಗೂ ಕಾಲು ಸ್ನಾಯುಗಳು ಬಲಿಷ್ಠವಾಗುತ್ತವೆ.

ಪ್ರತಿದಿನ ಕನಿಷ್ಠ ಅರ್ಧ ಗಂಟೆ ನಿಧಾನ ಜಾಗಿಂಗ್ ಮಾಡುವುದರಿಂದ ಶಕ್ತಿ ಮಟ್ಟ ಹೆಚ್ಚಾಗುತ್ತದೆ, ದೇಹ ಹಗುರವಾಗುತ್ತದೆ, ಮತ್ತು ಯುವಕರಂತೆ ಉತ್ಸಾಹ ತುಂಬಿದ ಅನುಭವ ಸಿಗುತ್ತದೆ. ಬಿಳಿ ರಕ್ತಕಣಗಳ ಉತ್ಪಾದನೆ ಹೆಚ್ಚುವುದರಿಂದ ರೋಗನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ. ವೈದ್ಯರ ಪ್ರಕಾರ, ಜಿಮ್ ಗೆ ಹೋಗಲು ಸಮಯವಿಲ್ಲದವರು ನಿಧಾನ ಜಾಗಿಂಗ್ ಮೂಲಕವೂ ಉತ್ತಮ ಫಿಟ್ನೆಸ್ ಕಾಪಾಡಿಕೊಳ್ಳಬಹುದು.

ನಿಧಾನ ಜಾಗಿಂಗ್ ಎಲ್ಲ ವಯಸ್ಸಿನವರಿಗೂ ಸುರಕ್ಷಿತ ಮತ್ತು ಪ್ರಯೋಜನಕಾರಿ ವ್ಯಾಯಾಮ. ಇದು ತೂಕ ಇಳಿಕೆ, ಹೃದಯದ ಆರೋಗ್ಯ, ಮಾನಸಿಕ ಶಾಂತಿ ಮತ್ತು ಶಕ್ತಿವರ್ಧನೆಗೆ ಸಹಕಾರಿಯಾಗುತ್ತದೆ. ದಿನನಿತ್ಯದ ಜೀವನದಲ್ಲಿ ಈ ಸರಳ ವ್ಯಾಯಾಮವನ್ನು ಅಳವಡಿಸಿಕೊಂಡರೆ ದೀರ್ಘಕಾಲದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!