ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಮಾರ್ಕೆಟ್ ಆಡಳಿತದ ನಿರ್ಲಕ್ಷ್ಯದಿಂದ ಪುಟ್ಟ ಬಾಲಕಿ ಪ್ರಾಣ ಪಕ್ಷಿ ಹಾರಿ ಹೋಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ನಿಜಾಮಾಬಾದ್ ಜಿಲ್ಲೆಯ ನಂದಿಪೇಟ್ ಮಂಡಲ ಕೇಂದ್ರದಲ್ಲಿರುವ ಎನ್.ಮಾರ್ಟ್ನಲ್ಲಿ ವಿದ್ಯುತ್ ಶಾಕ್ನಿಂದ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ನಂದಿಪೇಟ್ ಗ್ರಾಮದ ಶೇಖರ್ ಶಾಪಿಂಗ್ ಗೆಂದು ಸ್ಥಳೀಯ ಎನ್ ಮಾರ್ಟ್ ಸೂಪರ್ ಮಾರ್ಕೆಟ್ ಗೆ ತೆರಳಿದ್ದರು. ತಂದೆಯೊಂದಿಗೆ ಸೂಪರ್ ಮಾರ್ಕೆಟ್ ಗೆ ಬಂದ ಮಗುವೊಂದು ಐಸ್ಕ್ರೀಂ ತೆಗೆದುಕೊಳ್ಳಲು ರೆಫ್ರಿಜರೇಟರ್ ಬಾಗಿಲು ತೆಗೆಯುವಾಗ ವಿದ್ಯುತ್ ಸ್ಪರ್ಶಿಸಿದೆ. ಇದನ್ನು ಗಮನಿಸಿದ ತಂದೆ ಕೂಡಲೇ ಮಗುವನ್ನು ನಂದಿಪೇಟೆಯ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅದಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಮೃತದೇಹದೊಂದಿಗೆ ಸೂಪರ್ ಮಾರ್ಕೆಟ್ ಬಳಿ ಧರಣಿ ನಡೆಸಿದರು. ನಂದಿಪೇಟೆಯ ಎನ್ ಮಾರ್ಟ್ ಸೂಪರ್ ಮಾರ್ಕೆಟ್ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮೃತ ಮಗುವಿನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮಗುವಿಗೆ ನ್ಯಾಯ ಸಿಗುವವರೆಗೂ ಅಲ್ಲಿಂದ ಕದಲುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.