ಕೆನಡಾದಲ್ಲಿ ಕಪಿಲ್ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ: ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೇ (Surrey) ನಗರದಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಮತ್ತು ಅವರ ಪತ್ನಿ ಗಿನ್ನಿ ಚತ್ರತ್ ಒಡೆತನದ ಕ್ಯಾಪ್ಸ್ ಕೆಫೆ ಮೇಲೆ ಒಂದೇ ತಿಂಗಳಲ್ಲಿ ಎರಡನೇ ಬಾರಿ ಗುಂಡಿನ ದಾಳಿ ನಡೆದಿದೆ. ಗುರುವಾರ ಬೆಳಗಿನ ಜಾವ ನಡೆದ ಈ ದಾಳಿಯಲ್ಲಿ, ವೀಡಿಯೊ ದೃಶ್ಯಾವಳಿಗಳ ಪ್ರಕಾರ ಕನಿಷ್ಠ 25 ಗುಂಡು ಹಾರಿಸಲಾಗಿದೆ. ಇದೇ ಸ್ಥಳದಲ್ಲಿ ಜುಲೈ 10ರಂದು ಮೊದಲ ದಾಳಿ ನಡೆದಿತ್ತು.

ಅಧಿಕಾರಿಗಳ ಪ್ರಾಥಮಿಕ ಮಾಹಿತಿಯಂತೆ, ಈ ದಾಳಿಯ ಹಿಂದೆ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (BKI) ಗೆ ಸಂಬಂಧಿಸಿದ ಲಡ್ಡಿ ಗ್ಯಾಂಗ್ ಕೈವಾಡವಿರುವ ಸಾಧ್ಯತೆ ಇದೆ. ಇತ್ತೀಚಿನ ಘಟನೆಯ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಗೋಲ್ಡಿ ಧಿಲ್ಲನ್ ಸಾಮಾಜಿಕ ಮಾಧ್ಯಮದಲ್ಲಿ ಹೊಣೆ ಹೊತ್ತಂತೆ ಕಾಣುವ ಪೋಸ್ಟ್ ಹಾಕಲಾಗಿದೆ. ಪೋಸ್ಟ್‌ನಲ್ಲಿ ಕಪಿಲ್ ಶರ್ಮಾಗೆ ಎಚ್ಚರಿಕೆಯ ಸಂದೇಶವೂ ಸೇರಿದೆ.

ಮುಂಬೈ ಪೊಲೀಸರು ಈಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕಪಿಲ್ ಶರ್ಮಾ ವಾಸಿಸುವ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ಜೀವಕ್ಕೆ ಯಾವುದೇ ಗ್ಯಾಂಗ್‌ನಿಂದ ನೇರ ಬೆದರಿಕೆ ಇದೆಯೇ ಎಂಬುದನ್ನು ಪರಿಶೀಲಿಸಲು ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ಜೊತೆಗೆ, ಗ್ಯಾಂಗ್‌ಗೆ ಸಂಬಂಧಿಸಿದವರು ಕಪಿಲ್ ಶರ್ಮಾ ಅವರ ಮನೆ ಅಥವಾ ಶೂಟಿಂಗ್ ಸೆಟ್ ಸುತ್ತಲೂ ಕಾಣಿಸಿಕೊಂಡಿದ್ದಾರೆಯೇ ಎಂಬುದರ ವಿಚಾರಣೆ ನಡೆಯುತ್ತಿದೆ.

ಮೊದಲ ದಾಳಿಯ ಬಳಿಕ ಕಪಿಲ್ ಶರ್ಮಾ ಅವರು ಯಾವುದೇ ನೇರ ಬೆದರಿಕೆ ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಿಲ್ಲವೆಂದು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಎರಡನೇ ದಾಳಿಯ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಪ್ರಶ್ನಿಸುವ ನಿರೀಕ್ಷೆಯಿದೆ.

ಸರ್ರೇ ನಗರವು ವಾಂಕುವರ್‌ನ ಉಪನಗರವಾಗಿದ್ದು, ಕೆನಡಾದಲ್ಲಿ ಪ್ರಮುಖ ಪಂಜಾಬಿ ವಲಸೆ ಸಮುದಾಯ ವಾಸಿಸುವ ಪ್ರದೇಶ. ಈ ಘಟನೆ ಸ್ಥಳೀಯರು ಹಾಗೂ ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!