ಹೊಸದಿಗಂತ ವರದಿ ಅಂಕೋಲಾ:
ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗದಿಂದ ಜೀವ ವೈವಿದ್ಯದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ರಚಿಸಿರುವ ಸಮಿತಿ ಸದ್ಯದಲ್ಲೇ ಯೋಜನಾ ಪ್ರದೇಶದ ಸಮೀಕ್ಷೆ ನಡೆಸಿ ಜನಾಭಿಪ್ರಾಯವನ್ನು ಸಂಗ್ರಹಿಸಲಿರುವುದರಿಂದ ಹುಬ್ಬಳ್ಳಿ ಅಂಕೋಲಾ ರೈಲು ಹೋರಾಟ ಸಮಿತಿ ಅಂಕೋಲಾ ವತಿಯಿಂದ ಕಾರ್ಮಿಕ ಸಚಿವ ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಭೇಟಿ ಮಾಡಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಚಿವರ ನೇತೃತ್ವದಲ್ಲಿ ಮುಂದಿನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಆಗ್ರಹಿಸಲಾಯಿತು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಸಚಿವ ಹೆಬ್ಬಾರ್ ಅವರನ್ನು ಸಮಿತಿಯ ಅಧ್ಯಕ್ಷ ರಮಾನಂದ ನಾಯಕ ಅವರ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ಮುಖ್ಯ ಮಂತ್ರಿಗಳೂ ಈ ಕುರಿತು ಆಸಕ್ತಿ ತೋರಿದ್ದಾರೆ ಇಲ್ಲಿ ಪರಿಸರ ಹೋರಾಟಗಾರ ಜೊತೆಗೆ ಕೆಲವು ತಾಂತ್ರಿಕ ಸಮಸ್ಯೆಗಳು ಇವೆ ಎಂದರು.
ಸದ್ಯ ಒಂದು ನಿಯೋಗದ ಜೊತೆಯಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮತ್ತು ಪ್ರಹ್ಲಾದ್ ಜೋಷಿ ಅವರೊಂದಿಗೆ ಚರ್ಚೆ ನಡೆಸಿ ಅವರ ಮೂಲಕ ಕೇಂದ್ರದ ಮೇಲೆ ಒತ್ತಡ ತರುವ ಕೆಲಸವನ್ನು ಮಾಡಬೇಕು ಎಂದು ಸಚಿವ ಹೆಬ್ಬಾರ್ ತಿಳಿಸಿದರು.
ಹುಬ್ಬಳ್ಳಿ ಅಂಕೋಲಾ ರೈಲು ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ರಮಾನಂದ ನಾಯಕ ಹಲವಾರು ವರ್ಷಗಳ ಹೋರಾಟದ ಹಾದಿಯನ್ನು ಸಚಿವರಿಗೆ ತಿಳಿಸಿ ಇತ್ತೀಚೆಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವುದನ್ನು ಗಮನಕ್ಕೆ ತಂದರು.
ಪ್ರಮುಖರುಗಳಾದ ಭಾಸ್ಕರ ನಾರ್ವೇಕರ್, ಉಮೇಶ ನಾಯ್ಕ, ಹನುಮಂತ ಗೌಡ, ಆರ್.ಟಿ.ಮಿರಾಶಿ, ಜಗದೀಶ ನಾಯಕ, ಗೋಪಾಲಕೃಷ್ಣ ನಾಯಕ, ಪದ್ಮನಾಭ ಪ್ರಭು, ಶಾಂತಾರಾಮ ನಾಯಕ ಹಿಚ್ಕಡ, ಕೆ.ಎಚ್. ಗೌಡ, ಅರುಣ ನಾಡಕರ್ಣಿ, ಶಾಂತಲಾ ನಾಡಕರ್ಣಿ, ವಿನೋದ ನಾಯಕ, ದಾಮೋದರ ರಾಯ್ಕರ, ಸುರೇಶ ಅಸ್ಲಗದ್ದೆ ಮೊದಲಾದವರು ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ
