ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟಿ ಶ್ವೇತಾ ಮೆನನ್ ವಿರುದ್ಧ ಅಶ್ಲೀಲ ದೃಶ್ಯಗಳಲ್ಲಿ ನಟಿಸಿದ್ದಕ್ಕಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದರ ವಿರುದ್ಧ ನಟಿ ಶ್ವೇತಾ ಮೆನನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ನ ಜಸ್ಟೀಸ್ ವಿ.ಜಿ.ಅರುಣ್ ಅವರ ಪೀಠವು ನಟಿ ಶ್ವೇತಾ ಮೆನನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಗೆ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ನಟಿ ಶ್ವೇತಾ ಮೆನನ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ತಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕೆಂದು ನಟಿ ಶ್ವೇತಾ ಮೆನನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ದೂರು ಸಲ್ಲಿಸಿದ ಅಲ್ಪ ಅವಧಿಯಲ್ಲೇ, ದೂರನ್ನು ತನಿಖೆಗಾಗಿ ಪೊಲೀಸರಿಗೆ ಫಾರ್ವರ್ಡ್ ಮಾಡಲಾಗಿದೆ. ಸರಿಯಾದ ಪ್ರಕ್ರಿಯೆಯನ್ನು ಪಾಲಿಸಿಲ್ಲ. ಎರ್ನಾಕುಲಂನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ರಿಂದ ದೂರಅನ್ನು ಪೊಲೀಸರ ತನಿಖೆಗೆ ಫಾರ್ವರ್ಡ್ ಮಾಡುವ ಮುನ್ನ ಪಾಲಿಸಿದ ಪ್ರಕ್ರಿಯೆ ಬಗ್ಗೆ ಹೈಕೋರ್ಟ್ ರಿಜಿಸ್ಟ್ರಿ ವರದಿ ತರಿಸಿಕೊಳ್ಳಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್ ನಂಬರ್ 1075/2025 ಗೆ ಮುಂದೆ ಯಾವುದೇ ಕ್ರಮ ಕೈಗೊಳ್ಳದಂತೆ ಮಧ್ಯಂತರ ತಡೆಯಾಜ್ಞೆ ನೀಡಲಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಹಾಗೂ ದೂರುದಾರರಿಗೂ ನೋಟೀಸ್ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಮಲಯಾಳಂ ನಟಿ ಶ್ವೇತಾ ಮೆನನ್, ಸಾಲ್ಟ್ ಎನ್ ಪೆಪ್ಪರ್, ರತಿನಿವೀಡಂ, ಕಾಳಿಮನು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿದ್ದಾರೆ. ಆಗಸ್ಟ್ 15 ರಂದು ಚುನಾವಣೆ ನಿಗದಿಯಾಗಿದೆ. ಇದರ ಮಧ್ಯೆಯೇ ಮಾರ್ಟಿನ್ ಮೆನಚರಿ ಎಂಬುವವರು ನಟಿ ಶ್ವೇತಾ ಮೆನನ್ ವಿರುದ್ಧ ಅಶ್ಲೀಲ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ದೂರು ನೀಡಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ದುರುದ್ದೇಶಪೂರಿತ. ತಮ್ಮ ವಿರುದ್ಧ ಹೊರಿಸಿರುವ ಸೆಕ್ಷನ್ ಗಳಡಿ ಯಾವುದೇ ತಪ್ಪು ಮಾಡಿಲ್ಲ ಎಂದು ನಟಿ ಶ್ವೇತಾ ಮೆನನ್ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದಾರೆ.