ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಗೆ ತಡವಾಗಿ ಬಂದಿದ್ದಕ್ಕೆ ಟೀಚರ್ ನೀಡಿದ ಶಿಕ್ಷೆಯಿಂದಾಗಿ ಏಳು ವಿದ್ಯಾರ್ಥಿನಿಯರು ಪ್ರಜ್ಞೆ ತಪ್ಪಿದ್ದಾರೆ. ಹೌದು.. ಒಡಿಶಾದ ಬೋಲಂಗಿರ್ ಜಿಲ್ಲೆಯ ಪಟ್ನಾಗಢದಲ್ಲಿರುವ ಬಾಪೂಜಿ ಪ್ರೌಢಶಾಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಕರು ಕೋಪಗೊಂಡು 100 ಬಸ್ಕಿ ಹೊಡೆಯುವಂತೆ ಆದೇಶಿಸಿದ್ದಾರೆ. ಶಿಕ್ಷಕ ಆದೇಶದಂತೆ ನೂರು ಬಸ್ಕಿ ಹೊಡೆಯಲು ಸಾಧ್ಯವಾಗದೆ ವಿದ್ಯಾರ್ಥಿನಿಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಆಂಬ್ಯುಲೆನ್ಸ್ ಮೂಲಕ ಪಟ್ನಾಗಢ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಲಕಿಯರ ಸ್ಥಿತಿಯನ್ನು ಗಮನಿಸಿದ ವೈದ್ಯರು ಆತಂಕ ವ್ಯಕ್ತಪಡಿಸಿದರು. ಆಸ್ಪತ್ರೆಗೆ ಬರುವಷ್ಟರಲ್ಲಿ ವಿದ್ಯಾರ್ಥಿನಿಯರ ಆರೋಗ್ಯ ಉತ್ತಮವಾಗಿರಲಿಲ್ಲ ಕೂಡಲೇ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಅಪಾಯ ತಪ್ಪಿದೆ ಎಂದಿದ್ದಾರೆ. ಇದೀಗ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿದ್ದು, ಭಯಪಡುವ ಅಗತ್ಯವಿಲ್ಲ ಎಂದು ವೈದ್ಯಾಧಿಕಾರಿ ಪಿತಾಬಾಶ್ ಶಾ ತಿಳಿಸಿದ್ದಾರೆ.
ಶಾಲೆಯ ಪ್ರಾರ್ಥನಾ ಸಮಯ ಮುಗಿದ ಬಳಿಕ ಶಾಲೆಗೆ ಬಂದಿದ್ದಕ್ಕೆ ಶಿಕ್ಷಕ ಬಿಕಾಶ್ ದರುವಾ 100 ಬಸ್ಕಿ ಹೊಡೆಯುವಂತೆ ಸೂಚಿಸಿದ್ದಾರೆ. ಈ ಘಟನೆ ರಾಜ್ಯ ಶಿಕ್ಷಣ ಸಚಿವ ಸಮೀರ್ ರಂಜನ್ ದಾಸ್ ಅವರ ಗಮನಕ್ಕೆ ಬಂದಿದ್ದು, ಶಿಕ್ಷಕನನ್ನು ತನಿಖೆಗೆ ಆದೇಶಿಸಿದ್ದಾರೆ.

