ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಭವನ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಇಂದು ರಾಹುಲ್ ಗಾಂಧಿ ಕೂಡ ಕಾವೇರಿ ಭವನಕ್ಕೆ ಭೇಟಿ ನೀಡಲಿದ್ದಾರೆ.
ನಿನ್ನೆಯಷ್ಟೇ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ದೆಹಲಿಯಲ್ಲಿ 138 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕರ್ನಾಟಕ ಭವನವನ್ನು ಉದ್ಘಾಟಿಸಿದರು.
ಇನ್ನು ದೆಹಲಿಯಲ್ಲೇ ತಂಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದು, ಭೇಟಿ ವೇಳೆ ಪರಿಷತ್ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿ ಮತ್ತು ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಭವಿಷ್ಯದಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿ ಬದಲಾವಣೆಯ ವಿಷಯದಲ್ಲಿ ಈ ಭೇಟಿ ನಿರ್ಣಾಯಕವಾಗಿರುವುದರಿಂದ, ಇಬ್ಬರೂ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹೈಕಮಾಂಡ್ ನಾಯಕರೊಂದಿಗೆ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
