ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ: ಅಕ್ರಮ ಕಟ್ಟಡಗಳಿಗೆ ನೋಟಿಸ್ ನೀಡಲು ಬಿಬಿಎಂಪಿಗೆ ಡಿಕೆಶಿ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಹೃದಯಭಾಗವಾದ ನಗರ್ತಪೇಟೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತ ದಿಗ್ಭ್ರಮೆ ಮೂಡಿಸಿದೆ. ಹೊತ್ತಿ ಉರಿದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಐವರ ಪ್ರಾಣ ಬಲಿ ಪಡೆದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದರೂ ನೀರಿನ ಕೊರತೆಯಿಂದ ಬೆಂಕಿ ನಂದಿಸಲು ವಿಳಂಬ ಉಂಟಾಯಿತು. ಈ ಘಟನೆ ನಗರದಲ್ಲಿನ ಕಟ್ಟಡಗಳ ಸುರಕ್ಷತಾ ಕ್ರಮಗಳ ಕುರಿತಂತೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಟ್ಟಡ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಇಲ್ಲಿ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸಲಾಗಿದೆ. ಈ ಪರಿಸ್ಥಿತಿಗೆ ಸಾರ್ವಜನಿಕರ ನಿರ್ಲಕ್ಷ್ಯ ಕಾರಣ. ಬಾಡಿಗೆಗೆ ಮನೆಗಳನ್ನು ನೀಡುವವರು ಕಡ್ಡಾಯವಾಗಿ ಸೇಫ್ಟಿ ಕ್ರಮಗಳನ್ನು ಕೈಗೊಳ್ಳಬೇಕು. ಅಕ್ರಮ ಕಟ್ಟಡಗಳಿಗೆ ನೋಟಿಸ್ ನೀಡಲು ಬಿಬಿಎಂಪಿಗೆ ಸೂಚನೆ ನೀಡಿದ್ದೇವೆ. ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಈ ಅಗ್ನಿ ಅವಘಡದಲ್ಲಿ ಮೃತಪಟ್ಟವರು ರಾಜಸ್ಥಾನ ಮೂಲದವರಾಗಿದ್ದು, ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಡಿಕೆ ಶಿವಕುಮಾರ್ ಘೋಷಿಸಿದರು. ಜೊತೆಗೆ ಗೃಹಸಚಿವ ಪರಮೇಶ್ವರ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಇತರ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವ ಜಮೀರ್ ಅಹ್ಮದ್ ಖಾನ್ ವೈಯಕ್ತಿಕವಾಗಿ 5 ಲಕ್ಷ ರೂ. ಪರಿಹಾರ ಘೋಷಿಸಿ, ಸರ್ಕಾರದಿಂದಲೂ ನೆರವು ದೊರೆಯುವ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!