ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಯಾರನ್ನಾದರೂ ಮುಖ್ಯಮಂತ್ರಿ ಮಾಡಿಕೊಳ್ಳಿ, ಡಿಸಿಎಂ ಮಾಡಿಕೊಳ್ಳಿ ಆದ್ರೆ ನಮ್ಮ ಸಮುದಾಯದ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮೀಸಲಾತಿ ಕೊಡಿ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದರು.
ಧರ್ಮಗುರುಗಳಾದವರು ಸರ್ಕಾರದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬಾರದು. ಪಕ್ಷದ ವರಿಷ್ಠರು ಏನಾದ್ರು ಕೇಳಿದ್ರೆ ಸಲಹೆಗಳನ್ನ ಕೊಡಬೇಕು. ಯಾರನ್ನ ಸಿಎಂ, ಡಿಸಿಎಂ ಮಾಡಬೇಕೆನ್ನೋದು ವರಿಷ್ಠರು, ಶಾಸಕರಿಗೆ ಬಿಟ್ಟಿದ್ದು. ಅವರಾಗಿಯೇ ನಮ್ಮನ್ನ ಕೇಳಿದರೆ ಸ್ವಾಮೀಜಿಗಳಾದವರು, ಧರ್ಮಗುರುಗಳಾದ ನಾವು ಸಲಹೆ ಕೊಡಬೇಕು. ಆದರೆ ಸರ್ಕಾರದ ಆಂತರಿಕ ವಿಚಾರದಲ್ಲಿ ಕೈ ಹಾಕಬಾರದು ಎಂದರು.
ನಾವು ಮೀಸಲಾತಿಗಾಗಿ ಪಾದಯಾತ್ರೆ ಆರಂಭಿಸುವ ಮೊದಲು. ನಮ್ಮವರು ಮಂತ್ರಿ ಆಗಬೇಕು, ಮುಖ್ಯಮಂತ್ರಿ ಅಗಬೇಕು ಅಂತ ಹೇಳಿದ್ದೆವು. ಆದ್ರೆ ಈಗ ನಮಗೆ ಮಂತ್ರಿ, ಮುಖ್ಯಮಂತ್ರಿಗಿಂತ ಮೀಸಲಾತಿ ಮುಖ್ಯವಾಗಿದೆ. ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಿಕೊಡಿ ಅನ್ನೋದೇ ನಮ್ಮ ಒತ್ತಾಯ. ಆದ್ರೆ ಇದುವರೆಗೂ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಯಾರನ್ನಾದ್ರೂ ಸಿಎಂ, ಡಿಸಿಎಂ ಮಾಡಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿದರೆ ಸಾಕು ಎಂದರು.
