ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂಜನಗೂಡು ನಂಡುಂಡೇಶ್ವರನ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಶಾಂತಿ ಸಭೆ ವಿಫಲವಾಗಿದ್ದು, ಇಂದು ನಂಜನಗೂಡು ಬಂದ್ಗೆ ಕರೆ ನೀಡಲಾಗಿದೆ.
ರಾಕ್ಷಸ ಸಂಹಾರ ಆಚರಣೆಗೆ ಅಡ್ಡಿ, ಉತ್ಸವಮೂರ್ತಿ ಮೇಲೆ ಎಂಜಲು ನೀರು ಎರಚಿದ್ದನ್ನು ಖಂಡಿಸಿ ಬಂದ್ಗೆ ಕರೆ ನೀಡಲಾಗಿದೆ. ಬಂದ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.
ದಲಿತ ಸಂಘರ್ಷ ಸಮಿತಿ ಹಾಗೂ ನಂಜುಂಡೇಶ್ವರನ ಭಕ್ತಮಂಡಳಿ ನಡುವೆ ಶಾಂತಿ ಸ್ಥಾಪನೆಗಾಗಿ ಅಪರ ಜಿಲ್ಲಾಧಿಕಾರಿ ಲೋಕನಾಥ್ ಸಭೆ ನಡೆಸಿದ್ದಾರೆ. ಆದರೆ ಶಾಂತಿ ಸಭೆ ವಿಫಲವಾಗಿದ್ದು, ನಂಜುಂಡೇಶ್ವರ ಭಕ್ತ ಮಂಡಳಿ ಬಂದ್ಗೆ ಕರೆ ನೀಡಿದೆ.
ವಿವಾದಕ್ಕೆ ಕಾರಣ ಏನು?
ವರ್ಷಗಳಿಂದ ಮಹಿಷ ಸಂಹಾರ ಸಂಪ್ರದಾಯವನ್ನು ನಂಜುಂಡೇಶ್ವರನ ಜಾತ್ರೆಯಲ್ಲಿ ನಡೆಸಲಾಗುತ್ತಿದೆ. ಉತ್ಸವ ಮೂರ್ತಿ ಹೊತ್ತವರು ಮಹಿಷಾಸುರನ ರಂಗೋಲಿಯನ್ನು ಅಳಿಸಿ ಹಾಕಿ ಮಹಿಷಾಸುರನ ಬ್ಯಾನರ್ ಹರಿಯುವುದು ವಾಡಿಕೆಯಾಗಿದೆ. ಈ ವರ್ಷ ಈ ಪದ್ಧತಿಗೆ ದಲಿತ ಸಂಘರ್ಷ ಸಮಿತಿ ಅಡ್ಡಿಪಡಿಸಿದೆ. ಮಹಿಷಾಸುರ ನಮ್ಮ ರಾಜ, ಆತನನ್ನು ಈ ರೀತಿ ನಡೆಸಿಕೊಳ್ಳುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರಿದೆ. ಕೆಲವರು ತಮ್ಮ ಕುಡಿಯುವ ನೀರಿನ ಬಾಟಲಿಯಿಂದ ಉತ್ಸವ ಮೂರ್ತಿಗೆ ನೀರು ಎರಚಿದ್ದಾರೆ ಎನ್ನಲಾಗಿದೆ. ಇದು ನಂಜುಂಡೇಶ್ವರನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.