ಹೊಸದಿಗಂತ ವರದಿ ತುಮಕೂರು:
ವೇಗವಾಗಿ ಬರುತ್ತಿದ್ದ ಕೆಎಸ್ಆರ್ ಟಿ ಸಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಲಕ್ಕೆ ಉರುಳಿಬಿದ್ದ ಪರಿಣಾಮ ಸುಮಾರು 23ಕ್ಕು ಹೆಚ್ಚುಮಂದಿ ಗಾಯಗಳಾದ ಘಟನೆ ತಾಲ್ಲೂಕಿನ ಆಲದಕಟ್ಟೆಬಳಿ ಬುಧವಾರ ಹೆದ್ದಾರಿಯಲ್ಲಿ ನಡೆದಿದೆ.
ಮೈಸೂರು ವಿಭಾಗದ ಸಾರಿಗೆ ಬಸ್ ಗಂಗಾವತಿ ಯಿಂದ ಮೈಸೂರು ಕಡೆಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 150ಎನ ತಾಲ್ಲೂಕಿನ ಆಲದಕಟ್ಟೆ ಬಳಿ ಸುಮಾರು 12-40 ಗಂಟೆಯ ಸಮಯದಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ 40ಕ್ಕೂ ಹೆಚ್ಚುಮಂದಿ ಪ್ರಯಾಣಿಕರಿಂದ ತುಂಬಿದ ಬಸ್ ರಸ್ತೆ ಸನಿಹದ ಹೊಲಕ್ಕೆ ಉರುಳಿದೆ.
ಈ ಘಟನೆಯಲ್ಲಿ ಬಸ್ನಲ್ಲಿದ್ದ ಸುಮಾರು 23 ಮಂದಿಗೆ ಗಾಯಗಳಾಗಿದೆ. ತಕ್ಷಣವೇ ಸ್ಥಳೀಯರ ನೆರವಿನಿಂದ ಗಾಯಳುಗಳನ್ನು ರಕ್ಷಿಸಿ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಆಂಬುಲೃನ್ಸ್ ಮೂಲಕ ಕಳುಹಿಸಲಾಯಿತು. ಈ ಅಪಘಾತಕ್ಕೆ ನಿಖರಕಾರಣ ತಿಳಿದುಬಂದಿಲ್ಲ, ಅಪಘಾತದ ಸಮಯದಲ್ಲಿ ಮಳೆಬರುತ್ತಿತ್ತು, ಈ ಸ್ಥಳದಲ್ಲಿ ತುಂಬ ನವಿರಾದ ರಸ್ತೆಯಿರುವುದರಿಂದ ವೇಗವಾಗಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಕಕ್ಕೆ ಉರುಳಿರಬಹುದೆಂದು ಶಂಕಿಸಲಾಗಿದೆ.
ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಾಳುಗಳ ಸಂಬಂಧಿಕರಿಗೆ ಸ್ಥಳೀಯರು ಮಾಹಿತಿ ನೀಡಿದರು. ಒಬ್ಬ ಪ್ರಯಾಣಿಕರಿಗೆ ತಲೆಗೆ ಪೆಟ್ಟುಬಿದ್ದಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ನಟರಾಜ್ ಮಾಹಿತಿ ನೀಡಿದರು.
ತಿಪಟೂರು ಡಿವೈಎಸ್ಪಿ ವಿನಾಯಕ ಶೆಟಿಗೇರಿ, ಸಿಪಿಐ ನಡಾಫ್ ಸ್ಥಳಕ್ಕೆ ಭೇಟಿನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

