ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ವಿರುದ್ಧ ಕರ್ನಾಟಕ ಸರ್ಕಾರವು ದೆಹಲಿಯ ಜಂತರ್ ಮಂತರ್ನಲ್ಲಿ ಇಂದು ಪ್ರತಿಭಟನೆ ನಡೆಸಿದೆ. ಇದೀಗ ಕೇರಳ ಸರ್ಕಾರ ಕೂಡ ಇದೇ ವಿಚಾರಕ್ಕೆ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಕೈಗೊಂಡಿದೆ.
ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರ ಗುರುವಾರ(ಫೆಬ್ರವರಿ 8) ದೆಹಲಿಯ ಜಂತರ್ ಮಂತರ್ನಲ್ಲಿ ಆಂದೋಲನ ನಡೆಸಲಿದೆ.
ಕೇಂದ್ರ ಸರ್ಕಾರದ ಹಣಕಾಸು ನೀತಿಗಳು ರಾಜ್ಯವನ್ನು ಆರ್ಥಿಕವಾಗಿ ಕುಗ್ಗಿಸುತ್ತಿವೆ ಎಂದು ಕೇರಳ ಆರೋಪಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಸಂಪುಟ ಸಹೋದ್ಯೋಗಿಗಳು, ಎಲ್ಡಿಎಫ್ ಸಂಸದರು ಮತ್ತು ಶಾಸಕರು ಈ ಆಂದೋಲನದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದ ಆದಾಯದಲ್ಲಿ ಕೇಂದ್ರವು 57,400 ಕೋಟಿ ರೂ.ಗಳನ್ನು ಕಡಿತಗೊಳಿಸಿದೆ ಮತ್ತು ಕೇಂದ್ರವು ಸಂಗ್ರಹಿಸುವ ತೆರಿಗೆಯಿಂದ ತನ್ನ ಪಾಲನ್ನು ಕೊಡುತ್ತಿಲ್ಲ ಎಂದು ಕೇರಳ ಹೇಳಿಕೊಂಡಿದೆ.
2021-23ರ ಅಂಕಿಅಂಶಗಳ ಪ್ರಕಾರ, ರಾಷ್ಟ್ರೀಯ ಸರಾಸರಿಯಲ್ಲಿ ರಾಜ್ಯಗಳು ಸಂಗ್ರಹಿಸುವ ಪ್ರತಿ 65 ರೂ.ಗೆ ಕೇಂದ್ರವು 35 ರೂ.ಗಳನ್ನು ನೀಡಬೇಕೆಂದು ಕೇರಳ ಸರ್ಕಾರವು ರಾಜ್ಯ ಹಣಕಾಸು ಕುರಿತು ಆರ್ಬಿಐ ವರದಿಯನ್ನು ಉಲ್ಲೇಖಿಸಿ ಹೇಳಿದೆ. ಆದರೆ, ಕೇರಳದ ಸ್ವಂತ ತೆರಿಗೆ ಸಂಗ್ರಹದ ಪ್ರತಿ 79 ರೂ.ಗಳ ಪೈಕಿ ಕೇಂದ್ರವು ಕೇವಲ 21 ರೂ.ಗಳನ್ನು ನೀಡುತ್ತದೆ. ಅಂದರೆ, 100 ರೂ.ನಲ್ಲಿ ಕೇವಲ 21 ರೂ. ಮಾತ್ರ ಕೇಂದ್ರದ ಕೊಡುಗೆಯಾಗಿದೆ ಎಂದು ಆರೋಪಿಸಿದೆ.

