ಹೊಸದಿಗಂತ ವರದಿ, ಮೈಸೂರು:
ಸಂಪೂರ್ಣ ಬಹುಮತವಿರುವ ಸರ್ಕಾರವನ್ನು ನಾವು ಬೀಳಿಸುವ ಪ್ರಶ್ನೆಯೇ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲೇ ಆಂತರಿಕ ಕಚ್ಚಾಟ,ಭಿನ್ನಾಭಿಪ್ರಾಯ ಬಂದು ಸರ್ಕಾರ ಬೀಳಬಹುದು ಎಂದು ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬoಧಿಸಿದoತೆ ನೂರಕ್ಕೆ ನುರು ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಅವರೇ ಈ ಪ್ರಕರಣದ ಜವಾಬ್ದಾರಿ ಹೊರಬೇಕು ಎಂದರು.
ಸಿದ್ದರಾಮಯ್ಯ ಹಣಕಾಸು ಸಚಿವರಿದ್ದಾರೆ. ಹಣಕಾಸು ಇಲಾಖೆ ಅನುಮೋದನೆ ಇಲ್ಲದೆ, ಇಷ್ಟೋಂದು ಭಾರೀ ದೊಡ್ಡ ಮೊತ್ತದ ಹಣ ಮತ್ತೊಂದು ಅಕೌಂಟ್ಗೆ ಡೆಪಾಸಿಟ್ ಮಾಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಜವಾಬ್ದಾರಿ ಇದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಎಸ್ಟಿ ಸಮುದಾಯದ ನೂರಾರು ಕೋಟಿ ಹಣ ಹಗಲು ದರೋಡೆಯಾಗಿರುವುದರಿಮದ ಎಲ್ಲರೂ ತಲೆತಗ್ಗಿಸುವ ವಿಚಾರವಾಗಿದೆ ಎಂದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಸಿಎಂ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೈತಿಕ ಹೊಣೆಯನ್ನು ಸಿಎಂ ಹೊರುವುದು ಅನಿವಾರ್ಯ ಎಂದರು.
ರಾಜ್ಯದ ಅಭಿವೃದ್ಧಿ ಸಂಪೂರ್ಣ ಶೂನ್ಯ
ಕಳೆದ ೧೩ ತಿಂಗಳ ಅವಧಿಯಲ್ಲಿ ನನ್ನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನ ಬಂದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಿದೆ. ೧೩ ತಿಂಗಳಿoದ ಯಾವ ರಸ್ತೆಯ ಗುಂಡಿಗಳನ್ನು ಮುಚ್ಚಿಲ್ಲ. ಹೊಸ ರಸ್ತೆ ನಿರ್ಮಾಣ ಮಾಡಿಲ್ಲ ಎಂದರು. ನನ್ನ ಕ್ಷೇತ್ರಕ್ಕೆ ಯಾವ ಇಲಾಖೆಯಿಂದಲೂ ಒಂದು ರೂಪಾಯಿ ಅನುದಾನ ಬಂದಿಲ್ಲ. ಈ ಹಿಂದೆ ಜಾರಿಯಲ್ಲಿದ್ದ ಅಮೃತ್ ಯೋಜನೆಯ ಕೆಲಸಗಳು ಮಾತ್ರ ನಡೆಯುತ್ತಿದೆ. ಈ ಹಿಂದೆ ಒಂದು ಕ್ಷೇತ್ರಗಳಿಗೆ ೨೦ ಫಲಾನುಭವಿಗಳಿಗೆ ಕಾರು,ಸ್ಕೂಟರ್ಗಳನ್ನು ಕೊಡುತ್ತಿದ್ದರು. ಈಗ ಒಂದು ಕ್ಷೇತ್ರಕ್ಕೆ ಒಂದು ಕಾರು,ಸ್ಕೂಟರ್ ಕೊಡುತ್ತಾರೆ. ಎರಡು ಲಕ್ಷ ಜನಸಂಖ್ಯೆ ಹೊಂದಿರುವ ಕ್ಷೇತ್ರದಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣಾ ವೇಳೆ ಗ್ಯಾರಂಟಿ ಯೋಜನೆಗಳ ಮೇಲೆ ಸಂಪೂರ್ಣ ನಿಗಾ ಇರಿಸಿದ್ದರು. ಕ್ಷೇತ್ರದ ಜನರಿಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದರೆ ಯಾವ ಕೆಲಸಗಳು ನಡೆಯಲ್ಲ,ಅಭಿವೃದ್ಧಿ ಕಾರ್ಯಗಳು ಏನು ಆಗಲ್ಲ ಎಂಬುದು ಜನರಿಗೆ ಅರಿವಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ತನಿಖೆ ನಡೆಯುತ್ತಿದೆ. ವರದಿ ಬಂದ ತಕ್ಷಣ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

