ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೇವಾ ಕ್ಷೇತ್ರದಲ್ಲಿನ ಬೆಳವಣಿಗೆಯಿಂದಾಗಿ 2022-23ನೇ ಆರ್ಥಿಕ ವರ್ಷದಲ್ಲಿ ಈಗಾಗಲೇ ಭಾರತದ ರಫ್ತುಗಳು 700 ಬಿಲಿಯನ್ ಡಾಲರ್ ಮೌಲ್ಯವನ್ನು ಮೀರಿದ್ದು ಆರ್ಥಿಕ ವರ್ಷಾಂತ್ಯಕ್ಕೆ 750 ಬಿಲಿಯನ್ ಡಾಲರುಗಳಿಗೆ ತಲುಪಲಿದೆ. 2022-23ನೇ ಆರ್ಥಿಕ ವರ್ಷದ ಮೊದಲ ಹನ್ನೊಂದು ತಿಂಗಳಿನಲ್ಲಿ ರಫ್ತುಗಳು 702.88 ಬಿಲಯನ್ ಡಾಲರ್ ಗೆ ತಲುಪಿದ್ದು ಇದು 2021-22ನೇ ಆರ್ಥಿಕ ವರ್ಷಕ್ಕಿಂತ ಹೆಚ್ಚಾಗಿದೆ. 2021-22ರಲ್ಲಿ ಭಾರತದ ಒಟ್ಟಾರೆ ರಫ್ತು 672 ಬಿಲಿಯನ್ ಡಾಲರುಗಳಷ್ಟಿತ್ತು. “ನಾವು 2023 ನೇ ಆರ್ಥಿಕ ವರ್ಷದಲ್ಲಿ ಒಟ್ಟಾರೆ 750 ಬಿಲಿಯನ್ ಡಾಲರ್ ಸರಕು ಮತ್ತು ಸೇವಾ ರಫ್ತುಗಳ ಗುರಿಯನ್ನು ಮೀರುತ್ತೇವೆ” ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ಥ್ವಾಲ್ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದ ಭೀತಿಗಳ ನಡುವೆಯೂ ಭಾರತದ ಸರಕು ಮತ್ತು ಸೇವಾ ಕ್ಷೇತ್ರವು ವಿಸ್ತರಿಸುತ್ತಿದ್ದು ರಫ್ತುಗಳಲ್ಲಿ ಗಣನೀಯ ಏರಿಕೆ ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ಭಾರತದ ಸಂಚಿತ ಸರಕುಗಳ ರಫ್ತು 7.55 ಶೇಕಡಾದಷ್ಟು ಏರಿಕೆಯಾಗಿ 406 ಬಿಲಯನ್ ಡಾಲರ್ ಗೆ ತಲುಪಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಒಟ್ಟಾರೆ 421.8 ಬಿಲಯನ್ ಡಾಲರ್ ರಫ್ತು ಸಾಧಿಸಲಾಗಿತ್ತು. ಈ ಆರ್ಥಿಕ ವರ್ಷ ಪೂರ್ಣಗೊಳ್ಳು ಇನ್ನೂ ಕೆಲವು ದಿನಗಳು ಉಳಿದಿರುವುದರಿಂದ ಸರಕುಗಳ ರಫ್ತು ಹಿಂದಿನ ವರ್ಷದ ಮಟ್ಟವನ್ನೂ ಮೀರಿಸಲಿದೆ ಎಂದು ಬಾರ್ಥ್ವಾಲ್ ಅಭಿಪ್ರಾಯ ಪಟ್ಟಿದ್ದಾರೆ.
“ಕಳೆದ ಮೂರು ತಿಂಗಳುಗಳಲ್ಲಿ ಜಾಗತಿಕ ಬೇಡಿಕೆ ಕುಗ್ಗುತ್ತಿರುವ ಕಾರಣ ಸರಕು ರಫ್ತುಗಳಿಗೆ ಹೊಡೆತ ಬಿದ್ದಿದ್ದರೂ, ಸೇವೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಉಕ್ರೇನ್ನಲ್ಲಿನ ಯುದ್ಧ ಮತ್ತು ಪಾಶ್ಚಿಮಾತ್ಯ ಆರ್ಥಿಕತೆಗಳಲ್ಲಿನ ನಿಧಾನಗತಿಯು ಜಾಗತಿಕ ವ್ಯಾಪಾರವನ್ನು ಹೊಡೆದಿದೆ” ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ಥ್ವಾಲ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
