ಹೊಸ ದಿಗಂತ ಡಿಜಿಟಲ್ ಡೆಸ್ಕ್
ಜಪಾನ್ ಒಡೆತನದ ತೈಲದ ರಾಸಾಯನಿಕ ಟ್ಯಾಂಕರ್ ಒಂದನ್ನು ಭಾರತ ಸಮುದ್ರ ತೀರದ ಸನಿಹದಲ್ಲೇ ಗುರಿಯಾಗಿಸಿಕೊಂಡು ಡ್ರೋನ್ ದಾಳಿಯಾಗಿದೆ ಎಂದು ಅಮೆರಿಕದ ಪೆಂಟಗನ್ ರಕ್ಷಣಾ ವಿಭಾಗ ಹೇಳಿದೆ. ಈ ಡ್ರೋನ್ ಇರಾನ್ ಮೂಲದಿಂದ ಬಂದಿರುವುದಾಗಿ ಅಮೆರಿಕ ಹೇಳುತ್ತಿದೆ.
ಶನಿವಾರ ಬೆಳಗ್ಗೆ ಹತ್ತು ಗಂಟೆ ವೇಳೆಗೆ ಈ ದಾಳಿ ಸಂಭವಿಸಿದ್ದು, ಇದರಿಂದ ಈ ವಾಣಿಜ್ಯ ಹಡಗಿನ ವಿದ್ಯುತ್ ಪೂರೈಕೆ ವ್ಯವಸ್ಥೆ ಧ್ವಂಸವಾಗಿದೆ.
ಅಮೆರಿಕದ ರಕ್ಷಣಾ ವಿಭಾಗ ಹೊರಹಾಕಿರುವ ಈ ಮಾಹಿತಿಯು ಸೂಯಜ್ ಕಾಲುವೆ ಮತ್ತದರ ಮುಂದುವರಿದ ಭಾಗವಾಗಿರುವ ರೆಡ್ ಸಿ ಮಾರ್ಗದಲ್ಲಿ ತಿಂಗಳಿನಿಂದ ಉದ್ಭವವಾಗಿರುವ ಅಸರುಕ್ಷತಾ ವಾತಾವರಣವನ್ನು ಇನ್ನಷ್ಟು ತೀವ್ರವಾಗಿಸಿದೆ. ರೆಡ್ ಸಿ ತೀರಕ್ಕೆ ತಾಗಿಕೊಂಡಿರುವ ಯೆಮನ್ ದೇಶದ ಹೌತಿ ಉಗ್ರರು ಕಳೆದೊಂದು ತಿಂಗಳಿನಲ್ಲಿ ಆ ಮಾರ್ಗದ ಹಲವು ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದರು. ಅತ್ತ ಇಸ್ರೇಲಿನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಹೌತಿಗಳು ಹಮಾಸ್ ಉಗ್ರರ ಪರ ವಹಿಸಿರುವುದು ಉಲ್ಲೇಖನೀಯ. ಇದೀಗ ಭಾರತದ ಗುಜರಾತ್ ತೀರದ ಸನಿಹದಲ್ಲೇ ವರದಿಯಾಗಿರುವ ಡ್ರೋನ್ ದಾಳಿ ಸಹ ಇರಾನ್ ಮೂಲವನ್ನು ಹೊಂದಿರುವುದು ಹಾಗೂ ಇರಾನ್ ಸಹ ಸಂಘರ್ಷದಲ್ಲಿ ಹಮಾಸ್ ಉಗ್ರರ ಪರ ಹಾಗೂ ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳ ವಿರುದ್ಧವಿರುವುದು ಗಮನಿಸಬೇಕಾದ ಅಂಶ.
ಈ ಎಲ್ಲ ವಿದ್ಯಮಾನಗಳು ಜಾಗತಿಕ ಹಡಗು ವಹಿವಾಟಿನ ಶೇ. 12ರ ಪಾಲು ಹೊಂದಿರುವ ಸೂಯಜ್-ರೆಡಿ ಸಿ ಮಾರ್ಗವನ್ನು ಅಪಾಯಕಾರಿ ಆಗಿಸಿವೆ. ಪರಿಣಾಮವಾಗಿ ವಾಣಿಜ್ಯ ಹಡಗುಗಳು ಮೆಡಟರೇನಿಯನ್ ಸಮುದ್ರದಿಂದ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಸುತ್ತಿಕೊಂಡು ಏಷ್ಯವನ್ನು ತಲುಪುವ ದೂರದ ಮಾರ್ಗದತ್ತ ಹೊರಳುತ್ತಿವೆ. ಇದು ವಸ್ತು-ಸೇವೆಗಳ ದರವನ್ನು ಜಾಗತಿಕವಾಗಿ ದುಬಾರಿಯಾಗಿಸಲಿದೆ.

