ದಿಗಂತ ವರದಿ ಹುಲಸೂರು:
ಸಿಡಿಲು ಬಡಿದು 16 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಭಾಲ್ಕಿ ತಾಲೂಕಿನ ಮೇಹಕರ ಗ್ರಾಮದಲ್ಲಿ ನಡೆದಿದೆ.
ಹೊಲದಲ್ಲಿ ಸಂಗ್ರಹ ಮಾಡಲಾದ ಸೋಯಾ ಬಣವಿ ಮೇಲೆ ಟಾರ್ಪಲ್ ಹಾಕುವಾಗ ಸಿಡಿಲು ಬಡಿದು 10ನೇ ತರಗತಿ ವಿದ್ಯಾರ್ಥಿ ಮುಕೇಶ ಭೀಮರಾವ ಮೊಳಕೇರೆ(16) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಳೆಗೆ ಹುಲ್ಲು ಒದ್ದೆಯಾಗಬಾರದೆಂದು ಪ್ರಯತ್ನಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಭಾಲ್ಕಿ ಪಟ್ಟಣದ ಭಾರತ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದನು. ದಸರಾ ರಜೆ ಇರುವುದರಿಂದ ಹಾಗೂ ತಂದೆ ಭೀಮರಾವ ಮೊಳಕೆರೆ ತುಳಜಾಪುರದ ದೇವಿ ದರ್ಶನ ಪಡೆಯಲು ತೆರಳಿದ್ದರಿಂದ ತಾಯಿ ಜೊತೆ ಹೊಲಕ್ಕೆ ಹೋಗಿ ಟಾರ್ಪಲ್ ಹೊದಿಸುವ ವೇಳೆ ಸಿಡಿಲು ಬಡಿದಿದೆ.
ಈ ಘಟನೆ ಇಡೀ ಊರು ಹಾಗೂ ಶಾಲೆಗೂ ಅಪಾರ ನೋವು ತಂದಿದ್ದು, ಎಲ್ಲವೂ ಸದ್ಯಕ್ಕೆ ಸ್ತಭ್ದವಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.