ಹೊಸದಿಗಂತ ವರದಿ, ಮೈಸೂರು:
ಡಿಸೆಂಬರ್ ೬ ರ ಬಳಿಕ ನನ್ನ ಮನಸ್ಸಿನ ಭಾವನೆ ಹೇಳುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗುರುವಾರ ಮೈಸೂರಿನಲ್ಲಿ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಅರವಿಂದ ನಿಂಬಾವಳಿ ಅವರು ನೀಡಿರುವ ಹೇಳಿಕೆಗೆ ನನ್ನ ಸಮ್ಮತಿ ಇದೆ. ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. ಡಿಸೆಂಬರ್ ೬ರ ಬಳಿಕ ಅದನ್ನು ವಿವರಿಸ್ತಿನಿ, ಹೈಕಮಾಂಡ್ ಸೂಚನೆ ತಲೆ ಮೇಲೆ ಹೊತ್ತು ದುಡಿಮೆ ಮಾಡಿದ ಮೇಲೆ ಯಾವ ರೀತಿ ನನಗೆ ಹೊಡೆತ ಆಯ್ತು ಎಂಬುದನ್ನು ಡಿಸೆಂಬರ್ ೬ ಬಳಿಕ ಹೇಳ್ತಿನಿ. ಬಿಡಿ, ಬಿಡಿಯಾಗಿ ವಿವರಿಸ್ತಿನಿ ಎಂದು ತಿಳಿಸಿದರು.
ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ರಾಜಕಾರಣ ನಾಟಕ ಕಂಪನಿ ಅಲ್ಲ. ಒಳ ಒಪ್ಪಂದಕ್ಕೆ ಸಿಮೀತವಲ್ಲ ಎಂದು ಮಾರ್ಮಿಕವಾಗಿ ನುಡಿದರು. ಮಾಜಿ ಸಿಎಂ ಯಡಿಯೂರಪ್ಪ ನನ್ನನ್ನು ಸಂಪರ್ಕ ಮಾಡಿಲ್ಲ, ನಾನು ಯಾರನ್ನು ಸಂಪರ್ಕಿಸಿಲ್ಲ. ಆ ರೀತಿಯ ಯಾವ ಪ್ರಯತ್ನವೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.