ಹೊಸದಿಗಂತ ವರದಿ,ವಿಜಯಪುರ:
ಖವ್ವಾಲಿ ಕಾರ್ಯಕ್ರಮದಲ್ಲಿ ಹಾಡುಗಾರರ ಮೇಲೆ ನೋಟಿನ ಸುರಿಮಳೆ ಹರಿಸುವುದೊಂದು ಸಂಪ್ರದಾಯ. ಆದರೆ, ಅದನ್ನೆ ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ. ನೋಟು ಹಾರಿಸಿದಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್’ನ ಮದುವೆ ಸಮಾರಂಭಕ್ಕೆ ಹೋದಾಗ ಖವ್ವಾಲಿ ಕಾರ್ಯಕ್ರಮ ನಡೆಯುತ್ತಿತ್ತು. ಅದನ್ನು ಕೇಳುತ್ತ ಕುಳಿತ್ತಿದ್ದ ವೇಳೆ, ಆ ಗಾಯಕನ ಮೇಲೆ ಹಾರಿಸುತ್ತಿದ್ದ ನೋಟುಗಳು ಹಾರಿ ನನ್ನ ಬಳಿ ಬಂದು ಬಿದ್ದಿವೆ. ಆದರೆ ನಾನು ಆ ಮದುವೆ ಕಾರ್ಯಕ್ರಮದಲ್ಲಿ ಅತಿಥಿಮಾತ್ರ. ಖವ್ವಾಲಿ ಕಾರ್ಯಕ್ರಮದಲ್ಲಿ ನೋಟು ಹಾರಿಸಬೇಡ ಅಂತ ಹೇಳಲು ಸಾಧ್ಯನಾ ?, ನನ್ನೆಡೆಗೆ ಹಾರಿ ಬರುತ್ತಿದ್ದ ನೋಟುಗಳನ್ನು ತಡೆದು ನಿಲ್ಲಿಸಲು ಸಾಧ್ಯನಾ ?, ಅಲ್ಲದೆ ಅಲ್ಲಿ ಹಾರಿಸುತ್ತಿದ್ದ ನೋಟುಗಳಿಗೆ ಆ ಹಾಡುಗಾರನೇ ಒಡೆಯ, ಆತನಿಗೆ ಸೇರಿದ್ದು, ಮದುವೆಗಳಂತಹ ಸಂಭ್ರಮದ ಕಾರ್ಯಕ್ರಮದಲ್ಲಿ ಇಂತಹ ಕಾರ್ಯಕ್ರಮಗಳು ಇರುವುದು ಸಾಮಾನ್ಯ. ಆದರೆ ಅದನ್ನೆ ಕಪೋಲಕಲ್ಪಿತವಾಗಿ ಬಿಂಬಿಸುವುದು ಸರಿಯಲ್ಲ ಎಂದು ದೂರಿದರು.
ಅಲ್ಲದೆ ರಾಜ್ಯದ ನೇಕಾರರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಕೊಡುಗೆಯಾಗಿ 10 ಎಚ್’ಪಿ ವರೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ವಿತರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಇದು ಬಡ ನೇಕಾರರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
