ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನವರಾತ್ರಿ ಆಚರಣೆಯ ಐದನೇ ದಿನ, ಈ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ.
ಸ್ಕಂದ ಮಾತಾ ಜಗತ್ ಕಲ್ಯಾಣ ರೂಪ. ತಾರಕಾಸುರನ ತೊಂದರೆಗಳಿಂದ ದೇವತೆಗಳು, ಭೂಮಿ ಮೇಲಿನ ಜನರು ಸಾಕಷ್ಟು ನೋವು ಅನುಭವಿಸುತ್ತಿರುತ್ತಾರೆ. ತಾರಕಾಸುರ ಬ್ರಹ್ಮದಿಂದ ವರವನ್ನು ಪಡೆದಿರುತ್ತಾನೆ. ತಾನು ಪಡೆದ ವರದಿಂದ ಆತ ಕೊಬ್ಬಿರುತ್ತಾನೆ. ಶಿವ ಪಾರ್ವತಿಯ ಶಿಶುವಿನಿಂದ ಮಾತ್ರ ತನಗೆ ಮರಣ ಎನ್ನುವ ವರವನ್ನು ಆತ ಪಡೆದಿರುತ್ತಾನೆ. ಪಾರ್ವತಿ ಹಾಗೂ ಶಿವನ ವಿವಾಹದ ನಂತರ ಅವರಿಗೆ ಸ್ಕಂದ ಅಥವಾ ಷಣ್ಮುಖನೆಂಬ ಪುತ್ರ ಹುಟ್ಟುತ್ತಾನೆ.
ಸ್ಕಂದನಿಗೆ ದೇವತೆಗಳೆಲ್ಲ ಶಕ್ತಿಯನ್ನು ಧಾರೆ ಎರೆಯುತ್ತಾರೆ. ಈ ಶಕ್ತಿ ಹಾಗೂ ದೇವಸೇನೆಯ ಸಮೇತನಾಗಿ ಸ್ಕಂದ ತಾರಕಾಸುರನ ವಿರುದ್ಧ ಹೋರಾಡಿ ಆತನನ್ನು ಕೊಂದು ವಾಪಾಸಾಗುತ್ತಾನೆ.
ತಾಕರಾಸುರನ ಉಪಟಳದಿಂದ ಬೇಸತ್ತ ಜನರಿಗೆ ಸ್ಕಂದ ಬೆಳಕಾಗುತ್ತಾನೆ ಜಗತ್ಕಲ್ಯಾಣ ಮಾಡಿದ ಸ್ಕಂದನನ್ನು ಹೆತ್ತು ಕೊಟ್ಟ ಪಾರ್ವತಿ ಸ್ಕಂದಮಾತೆಯಾಗುತ್ತಾಳೆ.
ಮಗ ಸ್ಕಂದನನ್ನು ಈ ದೇವೆ ತೊಡೆಯ ಮೇಲೆ ಕೂರಿಸಿಕೊಂಡಿರುತ್ತಾಳೆ. ದೇವಿಯ ಈ ಅವತಾರ ಅತ್ಯಂತ ಪವಿತ್ರವಾದುದು ಎನ್ನಲಾಗುತ್ತದೆ. ಈ ಅವತಾರವನ್ನು ಪೂಜಿಸಿದರೆ ಸ್ಕಂದ ಹಾಗೂ ಸ್ಕಂದಮಾತೆ ಇಬ್ಬರ ಆಶೀರ್ವಾದವೂ ದೊರಕುತ್ತದೆ. ಶುದ್ಧ ಮನಸ್ಸಿನಿಂದ ಪೂಜಿಸಿದ ಎಲ್ಲರಿಗೂ ಈ ತಾಯಿ ಒಲಿಯುತ್ತಾಳೆ. ಸಂಪತ್ತು ಹಾಗೂ ಸಮೃದ್ಧಿ ನೀಡುತ್ತಾಳೆ.
ಸ್ಕಂದಮಾತೆಗೆ ನಾಲ್ಕು ಭುಜಗಳಿರುತ್ತದೆ. ಒಂದು ಕೈಯಿಂದ ಕಂದ ಕಾರ್ತಿಕೇಯನನ್ನು ತಾಯಿ ಹಿಡಿದಿದ್ದಾಳೆ. ಇನ್ನುಳಿದ ಕೈಗಳಲ್ಲಿ ಕಮಲ ಪುಷ್ಪ,ವರಮುದ್ರೆ,ಇನ್ನೊಂದು ಕೈಯಲ್ಲೂ ಕಮಲ. ಈಕೆಯ ಶರೀರ ಬೆಳ್ಳಗಿದ್ದು, ಕಮಲದ ಮೇಲೆ ಈಕೆ ಆಸೀನಳಾಗಿದ್ದಾಳೆ. ಇದರಿಂದ ಆಕೆಯನ್ನು ಪದ್ಮಾಸನದೇವಿ ಎಂದು ಹೇಳಲಾಗುತ್ತದೆ.
ಸ್ಕಂದ ಮಾತೆಗೆ ಕೆಂಪು ಇಷ್ಟದ ಬಣ್ಣ, ಹಾಗಾಗಿ ಆಕೆಗೆ ಕೆಂಪು ಗುಲಾಬಿಯಿಂದ ಪೂಜಿಸಲಾಗುವುದು. ಷೋಡಶೋಪಚಾರ ಪೂಜೆ ನಂತರ ಆರತಿ ಮಾಡಿ ಈ ಪೂಜೆಯನ್ನು ಮುಕ್ತಾಯ ಮಾಡಬೇಕು. ಜೀವನದ ಸದ್ಗತಿಗೆ ಈಕೆಯನ್ನು ಪೂಜಿಸಲಾಗುವುದು.
