ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಹೆಚ್ಚಾಗಿದೆ. ಬೇಳೆ, ಅಕ್ಕಿ, ಹಾಲು, ಮಸಾಲೆ ಪುಡಿ ಮಾತ್ರವಲ್ಲದೆ, ಗೋಧಿಹಿಟ್ಟಿನಲ್ಲಿಯೂ ಮಿಶ್ರಣ ಮಾಡುತ್ತಿರುವುದರಿಂದ ಗ್ರಾಹಕರಿಗೆ ಶುದ್ಧ ಮತ್ತು ನಕಲಿ ಹಿಟ್ಟನ್ನು ಗುರುತಿಸುವುದು ಕಷ್ಟವಾಗಿದೆ. ಗೋಧಿಹಿಟ್ಟಿಗೆ ಸೀಮೆಸುಣ್ಣದ ಪುಡಿ, ಬೋರಿಕ್ ಪೌಡರ್ ಅಥವಾ ಮೈದಾವನ್ನು ಸೇರಿಸಿ ಮಾರಾಟ ಮಾಡುವ ಪ್ರಕರಣಗಳು ಕಂಡುಬಂದಿವೆ. ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದಾದ ಇಂತಹ ಮಿಶ್ರಿತ ಹಿಟ್ಟನ್ನು ತಿನ್ನುವುದರಿಂದ ದೀರ್ಘಕಾಲಿಕ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಹೀಗಾಗಿ, ಮನೆಯಲ್ಲೇ ಸುಲಭವಾಗಿ ಶುದ್ಧ ಹಿಟ್ಟು ಮತ್ತು ನಕಲಿ ಹಿಟ್ಟನ್ನು ಗುರುತಿಸಲು ಕೆಲವು ವಿಧಾನಗಳನ್ನು ಅನುಸರಿಸಬಹುದು.
ನೀರಿನಲ್ಲಿ ಪರೀಕ್ಷೆ
ಒಂದು ಲೋಟ ನೀರಿಗೆ ಅರ್ಧ ಚಮಚ ಗೋಧಿಹಿಟ್ಟನ್ನು ಹಾಕಿ 10–20 ಸೆಕೆಂಡುಗಳ ಕಾಲ ಬಿಡಿ. ಹಿಟ್ಟು ನೀರಿನಲ್ಲಿ ತೇಲುತ್ತಿದ್ದರೆ ಅದು ನಕಲಿ. ಹಿಟ್ಟು ಮುಳುಗಿದರೆ ಅದು ಶುದ್ಧ.
ಹಿಟ್ಟಿನ ನಾದುವಿಕೆ
ಶುದ್ಧ ಗೋಧಿಹಿಟ್ಟು ಮೃದುವಾಗಿ ನಾದುತ್ತದೆ ಮತ್ತು ಕಡಿಮೆ ನೀರಿನಿಂದಲೇ ಚೆನ್ನಾಗಿ ಬೆರೆತುಬಿಡುತ್ತದೆ. ಆದರೆ ನಕಲಿ ಹಿಟ್ಟನ್ನು ನಾದಲು ಹೆಚ್ಚಿನ ನೀರು ಬೇಕಾಗುತ್ತದೆ ಮತ್ತು ಅದು ಗಟ್ಟಿ, ಒರಟಾಗಿರುತ್ತದೆ.
ಚಪಾತಿಯ ಗುಣಮಟ್ಟ
ಶುದ್ಧ ಹಿಟ್ಟಿನಿಂದ ಮಾಡಿದ ಚಪಾತಿ ಮೃದುವಾಗಿ, ಗಂಟೆಗಳವರೆಗೂ ತಾಜಾ ಇರುತ್ತದೆ. ನಕಲಿ ಹಿಟ್ಟಿನಿಂದ ಮಾಡಿದ ಚಪಾತಿ ಒಣಗಿದ್ದು, ಗಟ್ಟಿಯಾಗಿರುತ್ತದೆ.
ನಿಂಬೆ ಪರೀಕ್ಷೆ
ಅರ್ಧ ಚಮಚ ಗೋಧಿಹಿಟ್ಟಿಗೆ ನಿಂಬೆ ರಸ ಹಾಕಿ ನೋಡಿ. ಗುಳ್ಳೆಗಳು ಹೊರಬಂದರೆ ಅದು ನಕಲಿ ಹಿಟ್ಟಿನ ಖಚಿತ ಗುರುತು.
ಮಾರುಕಟ್ಟೆಯಲ್ಲಿ ಸಿಗುವ ಗೋಧಿಹಿಟ್ಟು ನಕಲಿಯೇ ಶುದ್ಧವೇ ಎಂದು ಗುರುತಿಸುವುದು ಕಷ್ಟವಾದರೂ, ಇಂತಹ ಸರಳ ಪರೀಕ್ಷೆಗಳನ್ನು ಮನೆಯಲ್ಲೇ ಮಾಡಿ ಆರೋಗ್ಯವನ್ನು ಕಾಪಾಡಬಹುದು. ತಜ್ಞರ ಸಲಹೆಯಂತೆ ಶುದ್ಧ ಹಿಟ್ಟು ಮಾತ್ರ ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶ ಸಿಗುತ್ತದೆ ಮತ್ತು ಅನಾರೋಗ್ಯದ ಅಪಾಯ ತಪ್ಪುತ್ತದೆ.