ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ : ನಿಲಯ ಮೇಲ್ವಿಚಾರಕಿ ಅಮಾನತು

ಹೊಸದಿಗಂತ ವರದಿ, ಚಿತ್ರದುರ್ಗ

ತಾಲ್ಲೂಕಿನ ಅನ್ನೇಹಾಳ್, ಜಂಪಯ್ಯನಹಟ್ಟಿಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಊಟ ಸೇವಿಸಿ ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ (ಜೂನಿಯರ್ ವಾರ್ಡನ್) ಮರಾಠಿ ಲಕ್ಷ್ಮೀದೇವಿ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಆದೇಶಿಸಿದ್ದಾರೆ.

ಅನ್ನೇಹಾಳ್, ಜಂಪಯ್ಯನಹಟ್ಟಿಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕಳೆದ ಜುಲೈ ೧೨ ರಂದು ರಾತ್ರಿ ಊಟ ಸೇವನೆ ಬಳಿಕ ಸುಮಾರು ೦೮ ರಿಂದ ೦೯ ಮಕ್ಕಳಿಗೆ ಎದೆಉರಿ, ಹೊಟ್ಟೆಯಲ್ಲಿ ಉರಿ ಹಾಗೂ ವಾಂತಿ ಆಗಿ ಅಸ್ವಸ್ಥಗೊಂಡಿದ್ದರು. ಬಳಿಕ ಇವರಿಗೆ ಸಮೀಪದ ಗೊಡಬನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಬಳಿಕ ಮಕ್ಕಳು ಗುಣಮುಖರಾಗಿದ್ದರು.

ಆರೋಗ್ಯ ಸುರಕ್ಷತಾ ಅಧಿಕಾರಿಗಳು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಕಾಯಿಸಿ ಆರಿಸಿದ ನೀರನ್ನು ಕೊಡಬೇಕು. ನಿಲಯದಲ್ಲಿ ಕೆಟ್ಟಿರುವ ವಾಟರ್ ಪ್ಯೂರಿಫೈಯರ್ ದುರಸ್ತಿಪಡಿಸಲು ಸೂಚನೆ ನೀಡಿದ್ದರು. ಘಟನೆ ಬಗ್ಗೆ ನಿಲಯದ ವಾರ್ಡನ್‌ರವರಿಗೆ ಸಮಾಜಾಯಿಷಿ ನೀಡುವಂತೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.

ನಂತರದಲ್ಲಿ ಪುನಃ ಕಳೆದ ಆಗಸ್ಟ್ ೦೪ ರಂದು ಕೂಡ ವಿದ್ಯಾರ್ಥಿನಿಲಯದ ೦೫ ಮಕ್ಕಳು ರಾತ್ರಿ ಉಟ ಸೇವಿಸಿ ಅಸ್ವಸ್ಥಗೊಂಡಿದ್ದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿರುತ್ತಾರೆ. ಹಾಸ್ಟೆಲ್‌ನಲ್ಲಿ ಈ ರೀತಿ ಪದೇ ಪದೇ ಮಕ್ಕಳು ಊಟ ಸೇವನೆಯಿಂದ ಅಸ್ವಸ್ಥಗೊಂಡ ಪ್ರಕರಣ ನಡೆದರೂ, ಇಲಾಖಾ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ.

ನಿಲಯದ ಮೇಲ್ವಿಚಾರಕರುಗಳಿಗೆ ಸೂಚನೆ ನೀಡಿದ್ದರೂ, ಮಕ್ಕಳ ಊಟೋಪಚಾರದ ವ್ಯವಸ್ಥೆಯಲ್ಲಿ ಗಮನಹರಿಸದೆ ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ನಿಲಯದ ಮೇಲ್ವಿಚಾರಕರಾದ ಮರಾಠಿ ಲಕ್ಷ್ಮೀದೇವಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ವರದಿ ಸಲ್ಲಿಸಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕರ ವರದಿಯನ್ವಯ ಜಂಪಯ್ಯನಹಟ್ಟಿ ಹಾಸ್ಟೆಲ್‌ನ ಮೇಲ್ವಿಚಾರಕರಾದ ಮರಾಠಿ ಲಕ್ಷ್ಮೀದೇವಿ ಅವರ ವಿರುದ್ಧದ ಇಲಾಖಾ ವಿಚಾರಣೆ, ಶಿಸ್ತು ಕ್ರಮವನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!