ಹೊಸದಿಗಂತ ಡಿಜಿಟಲ್ ಡೆಸ್ಕ್:
ರ್ಯಾಪಿಡೋ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಚಾಲಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪಿಂಕ್ ಬೈಕ್ ಟ್ಯಾಕ್ಸಿ ಆರಂಭಿಸುವುದಾಗಿ ರ್ಯಾಪಿಡೋ ಘೋಷಿಸಿದೆ.
ಕರ್ನಾಟಕದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಪಿಂಕ್ ಬೈಕ್ ಟ್ಯಾಕ್ಸಿ ಆರಂಭವಾಗಲಿದೆ ಎಂದು ರ್ಯಾಪಿಡೋ ತಿಳಿಸಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಾಗೂ ಮಹಿಳೆಯರಿಗಾಗಿ ಉದ್ಯೋಗ ಸೃಷ್ಟಿಸಲು ಈ ಹೊಸ ಯೋಜನೆಯನ್ನು ರ್ಯಾಪಿಡೋ ರೂಪಿಸಿದೆ.
ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಈ ಹೊಸ ಯೋಜನೆಯನ್ನು ರ್ಯಾಪಿಡೋ ಘೋಷಣೆ ಮಾಡಿದೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರ್ಯಾಪಿಡೋ ಈ ಉಪಕ್ರಮಕ್ಕೆ ಕೈ ಹಾಕಿದೆ. ಇದರ ಭಾಗವಾಗಿ ಕಂಪನಿಯು 25,000 ಮಹಿಳಾ ನಾಯಕಿಯರನ್ನು ಪರಿಚಯಿಸಲು ಯೋಜಿಸಿದೆ. ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣವನ್ನು ಈ ಯೋಜನೆ ನೀಡಲಿದೆ ಎಂದು ರ್ಯಾಪಿಡೋ ಅಭಿಪ್ರಾಯಪಟ್ಟಿದೆ.
ಉದ್ಯೋಗ ಸೃಷ್ಟಿಯ ಹೊರತಾಗಿ, ಕಂಪನಿಯು ಮಹಿಳೆಯರಿಗೆ ಸುರಕ್ಷಿತ ಮತ್ತು ಬೆಂಬಲ ನೀಡುವ ಕೆಲಸದ ವಾತಾವರಣವನ್ನು ನಿರ್ಮಿಸುವತ್ತ ಗಮನಹರಿಸುತ್ತಿದೆ. ಪ್ರಯಾಣಿಕರು ಮತ್ತು ಚಾಲಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಸುರಕ್ಷತಾ ಕ್ರಮಗಳನ್ನು ರ್ಯಾಪಿಡೋ ಕೈಗೊಂಡಿದೆ. ಶೇಕಡಾ 35 ರಷ್ಟು ಉದ್ಯೋಗಿಗಳು ಸಣ್ಣ ನಗರಗಳು ಮತ್ತು ಪಟ್ಟಣಗಳಿಂದ ಬಂದಿದ್ದಾರೆ ಎಂದು ತಿಳಿಸಿದೆ.
