ಹೊಸದಿಗಂತ ವರದಿ ಅಂಕೋಲಾ:
ಅಂಕೋಲಾದ ಅಂಬಾರಕೊಡ್ಲ ರಸ್ತೆಯಲ್ಲಿ ಇರುವ ಪುರಸಭೆಯ ವಾಣಿಜ್ಯ ಸಂಕೀರ್ಣದ ಮೇಲ್ಮಹಡಿಯಲ್ಲಿರುವ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.
ಡಿ.ಟಿ.ಎಚ್ ಎಲೆಕ್ಟ್ರಾನಿಕ್ ಉಪಕರಣಗಳ ವಿತರಕರಿಗೆ ಸೇರಿದ್ದ ಅಂಗಡಿಯಲ್ಲಿ ಭಾನುವಾರ ಬೆಳಿಗ್ಗೆ ಹೊತ್ತಿಕೊಂಡು ಉರಿಯುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿ ಜಮಾವಣೆಗೊಂಡ ಸಾರ್ವಜನಿಕರು ಅಂಗಡಿಯಲ್ಲಿದ್ದ ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹೊರತಂದರೂ ಅಪಾರ ಪ್ರಮಾಣದಲ್ಲಿ ವಸ್ತುಗಳು, ಪೀಠೋಕರಣಗಳು ಸುಟ್ಟು ಕರಕಲಾಗಿ ಹಾನಿ ಸಂಭವಿಸಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕೆಲಸ ಮಾಡಿದ್ದು, ಈ ವಾಣಿಜ್ಯ ಮಳಿಗೆಯಲ್ಲಿ ಹಲವಾರು ಅಂಗಡಿಗಳಿದ್ದು ಬೆಳಿಗ್ಗಿನ ಸಮಯದಲ್ಲಿ ಬೆಂಕಿ ಕಂಡು ಬಂದ ತಕ್ಷಣ ಸಾರ್ವಜನಿಕರು ಅಕ್ಕ ಪಕ್ಕದ ಅಂಗಡಿಕಾರರು ಸಮಯಪ್ರಜ್ಞೆ ತೋರಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ತಾಲೂಕಿನಲ್ಲಿ ಬೆಳಿಗ್ಗಿನ ಜಾವ ಮಳೆಯ ಜೊತೆಗೆ ಭಾರೀ ಪ್ರಮಾಣದಲ್ಲಿ ಸಿಡಿಲು ಬಡಿದಿದ್ದು, ಇದರಿಂದಾಗಿ ವಿದ್ಯುತ್ ಶಾರ್ಟ್ ಸರ್ಕೀಟ್ ಅಥವಾ ಇನ್ನಾವುದೋ ಕಾರಣದಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.