ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ಪ-ಅಮ್ಮ ಪ್ರೀತಿಯಿಂದ ತಂದುಕೊಂಡಿದ್ದ ವಾಚ್‌ಒಂದು ಮಗುವಿನ ಸಾವಿಗೆ ಕಾರಣವಾಗಿದೆ. ಚಂದದ ವಾಚ್ ಎಂದು ಸೀನಿಯರ್ ವಿದ್ಯಾರ್ಥಿಗಳು ಅದನ್ನು ಕಿತ್ತುಕೊಳ್ಳಲು ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ಬಾಲಕ ಮೃತಪಟ್ಟಿದ್ದಾನೆ.
ವಿಜಯಪುರದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ಸ್ ಮೃತ ವಿದ್ಯಾರ್ಥಿ. ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ಸಾವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆ ಮುಂದೆ ಬಾಲಕನ ಶವವಿಟ್ಟು ಪೋಷಕರು ಹಾಗೂ ಸ್ಥಳಿಯರು ಪ್ರತಿಭಟಿಸಿದರು.
ಬಿಹಾರ ಮೂಲದ ಶೃತಿ ಹಾಗೂ ಸುನಿಲ್ ವಿಜಯಪುರದಲ್ಲಿ ಸೆಟಲ್ ಆಗಿದ್ದರು. ಪಾನಿಪುರಿ ಮಾಡಿ ಜೀವನ ನಡೆಸುತ್ತಿದ್ದ ಇವರು ಕಷ್ಟವಾದರೂ ಪರವಾಗಿಲ್ಲ ಎಂದು ಮಗನನ್ನು ಖಾಸಗಿ ಶಾಲೆಗೆ ಸೇರಿಸಿ ಓದಿಸುತ್ತಿದ್ದರು. ಮಗನ ಸಾವಿಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
9ನೇ ತರಗತಿಯ ವಿದ್ಯಾರ್ಥಿಗಳು ಹೊಡೆದ ಕಾರಣ ಅನ್ಸ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಶಾಲೆಗೆ ಈ ಬಗ್ಗೆ ಮಾಹಿತಿ ಒದಗಿಸಲಾಗಿತ್ತು. ಆದರೆ ಶಾಲೆಯವರು ನಿಮ್ಮ ಮಗ ಸತ್ತಿಲ್ಲವಲ್ಲ? ತಲೆ ತಿನ್ನಬೇಡಿ ಎಂದು ಫೋನ್ ಇಡುತ್ತಿದ್ದರು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಷಕರು ಮೃತದೇಹವನ್ನು ಶಾಲೆಯ ಮುಂದಿಟ್ಟು ಪ್ರತಿಭಟನೆ ಮಾಡಿದ್ದೇ ತಡ ಶಾಲೆಗೆ ಬೀಗ ಜಡಿದು ಎಲ್ಲರೂ ಪರಾರಿಯಾಗಿದ್ದಾರೆ.
ಸದ್ಯ ಬಾಲಕ ಸಾವಿಗೆ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಕಾರಣವೆಂಬ ಆರೋಪ ಕೇಳಿ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಹಿರಿಯ ವಿದ್ಯಾರ್ಥಿಗಳು ಮಾಡಿದ ಹಲ್ಲೆಯಿಂದ ಮೃತಪಟ್ಟಿದ್ದಾ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುವುದಾ ಎಂಬುದು ತಿಳಿದು ಬರಲಿದೆ. ಘಟನೆ ಕುರಿತು ಗೋಲಗುಂಬಜ್ ಪೊಲೀಸರು ತನಿಖೆ ನಡೆಸಿದ್ದಾರೆ.