ಹೊಸದಿಗಂತ ಡಿಜಿಟಲ್ ಡೆಸ್ಕ್
ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು 1,000 ವರ್ಷಗಳಷ್ಟು ಹಳೆಯದಾದ 80 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಿದೆ.
ರಾಜ್ಯ ಸರ್ಕಾರವು ರಾಜಕೀಯ ಲಾಭಕ್ಕಾಗಿ ಹಿಂದೂಗಳ ದೇವಾಲಯ ನವೀಕರಿಸುತ್ತಿಲ್ಲ, ದೇಗುಲಗಳ ಜೀರ್ಣೋದ್ಧಾರ ನಮ್ಮ ಜವಾಬ್ದಾರಿಯಾಗಿದೆ ಎಂದು ಸಚಿವ ಪಿ.ಕೆ. ಶೇಖರ್ ಬಾಬು ಹೇಳಿದ್ದಾರೆ.
ರಾಜ್ಯದ ಆರು ದೇವಸ್ಥಾನಗಳಿಗೆ 27.70 ಕೋಟಿ ವೆಚ್ಚದಲ್ಲಿ ರಾಜಗೋಪುರ ನಿರ್ಮಿಸಲಾಗುವುದು. ಇನ್ನೂ 10 ದೇವಸ್ಥಾನಗಳಲ್ಲಿ ಅನ್ನದಾನ ಆರಂಭಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
11 ಕೋಟಿ ವೆಚ್ಚದಲ್ಲಿ 14 ದೇವಸ್ಥಾನಗಳಲ್ಲಿ ನೂತನ ಅನ್ನದಾನ ಸಭಾಂಗಣಗಳನ್ನು ನಿರ್ಮಿಸಲಾಗುವುದು ಮತ್ತು ಎಲ್ಲ ಭಕ್ತರಿಗೆ ಪ್ರಸಾದ ನೀಡುವ ಯೋಜನೆಯನ್ನು ಇನ್ನೂ ಐದು ದೇವಸ್ಥಾನಗಳಿಗೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ವಿಗ್ರಹ ಚೋರರಿಂದ ತಮಿಳುನಾಡು ಪೊಲೀಸರು ವಶಪಡಿಸಿಕೊಂಡ ವಿಗ್ರಹಗಳನ್ನು ಚೆನ್ನೈನ ಕಪಾಲೀಶ್ವರ ದೇವಸ್ಥಾನದ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರದರ್ಶಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ಕೇಂದ್ರವು ಆಧ್ಯಾತ್ಮಿಕ ಗ್ರಂಥಾಲಯ, ಸಣ್ಣ ಸಭಾಂಗಣ, ಪುಸ್ತಕ ಮಳಿಗೆ ಮತ್ತು ಪ್ರಕಾಶನ ಕೇಂದ್ರವನ್ನು ಸಹ ಹೊಂದಿರುತ್ತದೆ.
ಕೋವಿಲ್ ಪಥಗೈಯ ಸುಂದರರಾಜ ಪೆರುಮಾಳ್ ದೇವಸ್ಥಾನದಲ್ಲಿ ಬೃಹತ್ ಗೋಶಾಲೆಯನ್ನು ಸ್ಥಾಪಿಸಲಾಗುವುದು ಮತ್ತು ಈ ಯೋಜನೆಗೆ 20 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದರೊಂದಿಗೆ ಇಲಾಖೆಯು ಈಗಿರುವ 121 ಗೋಶಾಲೆಗಳನ್ನು 20 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ
