ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತ್ತೊಂದು ಮಾನಹಾನಿ ಪ್ರಕರಣದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಜಾಮೀನು ಸಿಕ್ಕಿದೆ.
2018 ರ ಚುನಾವಣಾ ರ‍್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಚೈಬಾಸಾದ ಜನಪ್ರತಿನಿಧಿಗಳ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.
ಜಾರ್ಖಂಡ್ ಹೈಕೋರ್ಟ್ ನಿರ್ದೇಶನದ ಪ್ರಕಾರ ಬೆಳಗ್ಗೆ 10.55ರ ಸುಮಾರಿಗೆ ರಾಹುಲ್ ಗಾಂಧಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾದರು. ಅವರು ಕೋರಿದ್ದ ಜಾಮೀನು ಮಂಜೂರಾಗಿದ್ದು, ಈಗ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತೇವೆ ಎಂದು ರಾಹುಲ್ ಪರ ವಕೀಲರು ಹೇಳಿದರು.
ಜೂನ್ 26 ರಂದು ಖುದ್ದು ಹಾಜರಾಗುವಂತೆ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಜಾರ್ಖಂಡ್ ಹೈಕೋರ್ಟ್ ಮೊರೆ ಹೋಗಿದ್ದರು.
ತಮ್ಮ ಕಕ್ಷಿದಾರರು ನಿಗದಿತ ದಿನದಂದು ಹಾಜರಾಗಲು ಸಾಧ್ಯವಾಗುವುದಿಲ್ಲ. ಬದಲಿಗೆ ಆಗಸ್ಟ್ 6 ರಂದು ಹಾಜರಾಗಲು ಅವಕಾಶ ನೀಡುವಂತೆ ಜೂನ್ 10 ರಂದು ಕೇಳಿಕೊಂಡಿದ್ದರು.ಅವರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು.