‘ದರ್ಶನ್ ಖಂಡಿತ ವಾಪಾಸ್ ಬರ್ತಾರೆ’: ಅಭಿಮಾನಿಗಳಿಗೆ ಭರವಸೆ ನೀಡಿದ ವಿಜಯಲಕ್ಷ್ಮಿ ದರ್ಶನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರೂ, ಅವರ ಬಗ್ಗೆ ಚರ್ಚೆ ಹಾಗೂ ಸುದ್ದಿಗಳು ನಿರಂತರವಾಗಿ ನಡೆಯುತ್ತಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬ ಕಾರಣದಿಂದ ಸುಪ್ರೀಂ ಕೋರ್ಟ್ ಇತ್ತೀಚೆಗೆ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನನ್ನು ರದ್ದು ಮಾಡಿತು. ಈ ನಿರ್ಧಾರದಿಂದಾಗಿ ದರ್ಶನ್ ತಮ್ಮ ಚಲನಚಿತ್ರ ಕಾರ್ಯಗಳಲ್ಲಿ ತಾತ್ಕಾಲಿಕ ಅಡೆತಡೆ ಅನುಭವಿಸುತ್ತಿದ್ದಾರೆ. ಆದರೆ ಅವರು ಜೈಲಿನಲ್ಲಿರುವುದರಿಂದ ಚಿತ್ರರಂಗದ ಕೆಲಸ ನಿಲ್ಲಬಾರದು ಎಂದು ತಂಡಕ್ಕೆ ಸೂಚನೆ ನೀಡಿರುವುದು ಗಮನಾರ್ಹ. ವಿಶೇಷವಾಗಿ, ಅವರು ಅಭಿನಯಿಸಿರುವ ‘ದಿ ಡೆವಿಲ್’ ಚಿತ್ರದ ಬಿಡುಗಡೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ಇದೇ ಸಮಯದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಒಂದು ಪೋಸ್ಟ್ ಇದೀಗ ಸಾಕಷ್ಟು ಗಮನ ಸೆಳೆದಿದೆ. ತಮ್ಮ ಪತಿಯ ಸ್ಥಿತಿ ಬಗ್ಗೆ ಚಿಂತೆಯಲ್ಲಿರುವ ಅಭಿಮಾನಿಗಳಿಗೆ ಧೈರ್ಯ ತುಂಬುವ ರೀತಿಯಲ್ಲಿ ಅವರು ಬರಹ ಹಂಚಿಕೊಂಡಿದ್ದಾರೆ.

ದರ್ಶನ್ ಅವರು ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ನೇರವಾಗಿ ತಮ್ಮಿಂದಲೇ ಸಿನಿಮಾಗಳು ಹಾಗೂ ವೈಯಕ್ತಿಕ ವಿಚಾರಗಳ ಅಪ್‌ಡೇಟ್‌ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ‘ನಿಮ್ಮ ಚಾಲೆಂಜಿಂಗ್ ಸ್ಟಾರ್ ಹೃದಯದಲ್ಲಿ ನೀವೆಲ್ಲರೂ ಇದ್ದೀರಿ. ಅವರ ಪರವಾಗಿ ನಾನು ಸೋಷಿಯಲ್ ಮೀಡಿಯಾ ಹ್ಯಾಂಡಲ್ ನಡೆಸುತ್ತೇನೆ, ಸಿನಿಮಾದ ಪ್ರಮೋಷನ್ ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವು ದರ್ಶನ್ ಕುಟುಂಬಕ್ಕೆ ದೊಡ್ಡ ಬಲವಾಗಿದೆ ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ. ‘ಪ್ರೀತಿ, ಪ್ರಾರ್ಥನೆ ಮತ್ತು ತಾಳ್ಮೆ ತೋರಿಸಿದರೆ ಅದು ದರ್ಶನ್ ಅವರಿಗೆ ಶಕ್ತಿ ನೀಡುತ್ತದೆ. ಅವರು ಶೀಘ್ರದಲ್ಲೇ ನಿಮ್ಮ ನಡುವೆಯೇ ವಾಪಸ್ ಆಗುತ್ತಾರೆ’ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!