ದಕ್ಷಿಣ ಆಫ್ರಿಕಾದ SA20 ಲೀಗ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ದಾದಾ: ಸೌರವ್ ಗಂಗೂಲಿಗೆ ಮುಖ್ಯ ಕೋಚ್ ಹುದ್ದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷರಾದ ಸೌರವ್ ಗಂಗೂಲಿ ಇದೀಗ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ದಕ್ಷಿಣ ಆಫ್ರಿಕಾದ SA20 ಲೀಗ್‌ನ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಅವರನ್ನು ತನ್ನ ಹೊಸ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಇದು ಗಂಗೂಲಿಯ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪೂರ್ಣಕಾಲಿಕ ಕೋಚಿಂಗ್ ಜವಾಬ್ದಾರಿ.

ಗಂಗೂಲಿ ಈ ಮೊದಲು ಬಿಸಿಸಿಐ ಅಧ್ಯಕ್ಷರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಐಪಿಎಲ್ ಮತ್ತು ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು. ಆದರೆ ಇದೀಗ ಮೊದಲ ಬಾರಿಗೆ ಅವರು ಮುಖ್ಯ ಕೋಚ್ ಹುದ್ದೆಯನ್ನು ಸ್ವೀಕರಿಸುತ್ತಿದ್ದಾರೆ.

ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಗಂಗೂಲಿಯ ನೇಮಕಾತಿಯನ್ನು ಘೋಷಿಸಿದೆ. “ಕೋಲ್ಕತ್ತಾ ರಾಜಕುಮಾರರಿಗೆ ಹೊಸ ಪ್ರಾರಂಭ” ಎಂದು ತಂಡದ ಪ್ರಕಟಣೆ ಹೇಳಿದೆ. ಗಂಗೂಲಿಯ ಆಗಮನದೊಂದಿಗೆ ತಂಡ ಹೊಸ ಶಕ್ತಿ ಪಡೆದುಕೊಳ್ಳಲಿದೆ ಎಂಬ ನಿರೀಕ್ಷೆ ಮೂಡಿದೆ.

ಹಿಂದಿನ ಸೀಸನ್‌ನಲ್ಲಿ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್ ತಂಡದ ಕೋಚ್ ಆಗಿದ್ದರು. ಆದರೆ ಅವರು ಹುದ್ದೆ ತೊರೆದ ಒಂದು ದಿನದ ನಂತರವೇ ಗಂಗೂಲಿಯ ನೇಮಕಾತಿ ನಡೆದಿದೆ. ಹೀಗಾಗಿ ತಂಡವನ್ನು ಮರುಸಂಘಟಿಸಲು ಈಗ ಗಂಗೂಲಿಯೇ ಹೊಣೆ.

ಪ್ರಿಟೋರಿಯಾ ಕ್ಯಾಪಿಟಲ್ಸ್ ಮೊದಲ ಸೀಸನ್‌ನಲ್ಲಿ ಫೈನಲ್ ತಲುಪಿದ್ದರೂ, ಕಳೆದ ಸೀಸನ್‌ನಲ್ಲಿ ಅವರ ಪ್ರದರ್ಶನ ನಿರಾಸೆ ಮೂಡಿಸಿತ್ತು. ಮುಂದಿನ SA20 ಲೀಗ್ 2025 ಡಿಸೆಂಬರ್ 26ರಿಂದ 2026 ಜನವರಿ 25ರವರೆಗೆ ನಡೆಯಲಿದ್ದು, ಈ ಬಾರಿ ತಂಡವನ್ನು ಬಲಿಷ್ಠಗೊಳಿಸುವುದು ಗಂಗೂಲಿಯ ಮುಖ್ಯ ಗುರಿಯಾಗಲಿದೆ.

ಗಂಗೂಲಿ ಕನಸು
ಇತ್ತೀಚೆಗೆ ಗಂಗೂಲಿ ಭಾರತೀಯ ತಂಡದ ಕೋಚ್ ಆಗಲು ಬಯಸಿರುವುದಾಗಿ ಹೇಳಿದ್ದರು. ಈಗ SA20 ಲೀಗ್‌ನಲ್ಲಿ ಕೋಚ್ ಆಗಿ ಅವರು ತೊಡಗಿರುವುದು ಆ ಕನಸಿನತ್ತ ಸಾಗುವ ಪ್ರಮುಖ ಹೆಜ್ಜೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!