ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ʼಕೊಲ್ಲಲು ಸಿದ್ಧರಾಗಿರಿʼ ಎಂದು ಸಭೆಯೊಂದರಲ್ಲಿ ಬೆಂಬಲಿಗರಿಗೆ ಪ್ರಚೋದನೆ ನೀಡಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಸಭೆಯೊಂದರಲ್ಲಿ ಮಾತನಾಡಿದ್ದ ಪಟೇರಿಯಾ ಸಂವಿಧಾನವನ್ನು ಉಳಿಸಲು ಪ್ರಧಾನಿ ಮೋದಿಯನ್ನು ಕೊಲ್ಲುವಂತೆ ಜನರ ಗುಂಪನ್ನು ಪ್ರೇರೇಪಿಸುತ್ತಿರುವ ವೀಡಿಯೊ ವೈರಲ್ ಆಗಿ ದೇಶದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
“ಮೋದಿ ಚುನಾವಣೆಯನ್ನು ಕೊನೆಗೊಳಿಸುತ್ತಾರೆ, ಮೋದಿ ಧರ್ಮ, ಜಾತಿ, ಭಾಷೆಯ ಆಧಾರದ ಮೇಲೆ ವಿಭಜನೆ ಮಾಡುತ್ತಾರೆ. ಮೋದಿಯವರಿಂದಾಗಿ ದಲಿತರು, ಬುಡಕಟ್ಟುಗಳು ಮತ್ತು ಅಲ್ಪಸಂಖ್ಯಾತರ ಜೀವನ ಅಪಾಯದಲ್ಲಿದೆ. ನಾವು ಸಂವಿಧಾನವನ್ನು ಉಳಿಸಬೇಕು, ಹಾಗಾಗಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಎಂದು ಹೇಳಿದ್ದರು.
ಅವರ ಹೇಳಿಕೆಯನ್ನು ಗಂಬೀರವಾಗಿ ಪರಿಗಣಿಸಿದ ಮಧ್ಯಪ್ರದೇಶ ಸರ್ಕಾರವು ರಾಜ್ಯದ ಮಾಜಿ ಸಚಿವನೂ ಆದ ಪಟೇರಿಯಾ ವಿರುದ್ಧ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಈ ಸಂಬಂಧ ಪನ್ನಾದ ಪಾವಾಯಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಮಧ್ಯಾಹ್ನ ಪಟೇರಿಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಪಟೇರಿಯಾ ಅವರನ್ನು ರಾಜ್ಯದ ದಾಮೋಹ್ ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಅವರ ನಿವಾಸದಿಂದ ಇಂದು ಬಂಧಿಸಲಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. “ಭಾರತ್ ಜೋಡೋ ಯಾತ್ರೆ ಮಾಡುವವರ ನಿಜವಾದ ಮುಖ ಹೊರಬರುತ್ತಿದೆʼ ಎಂದು ಟೀಕಿಸಿದ್ದಾರೆ.
“ಕಾಂಗ್ರೆಸ್ ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿಯೇ ಕಾಂಗ್ರೆಸ್ ನಾಯಕರೊಬ್ಬರು ಅವರನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ದ್ವೇಷದ ಪರಮಾವಧಿಯಾಗಿದೆ. ಕಾಂಗ್ರೆಸ್‌ನ ನಿಜವಾದ ಭಾವನೆಗಳು ಬಹಿರಂಗಗೊಳ್ಳುತ್ತಿವೆ. ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳುತ್ತದೆ.” ಎಂದು ಮುಖ್ಯಮಂತ್ರಿಗಳು ಕಿಡಿಕಾರಿದ್ದಾರೆ.
ಮಾತು ವಿವಾದಕ್ಕೆ ತಿರುಗುತಿದ್ದಂತೆ ಸ್ಪಷ್ಟನೆ ನೀಡಿದ್ದ ಪಟೇರಿಯಾ, ನಾನು ಮೋದಿಯವರ ವಿರುದ್ಧ ಕೊಲೆ ಎಂಬ ಪದವನ್ನು ಸೋಲಿಸಬೇಕು ಎಂಬರ್ಥದಲ್ಲಿ ಬಳಸಿದ್ದೆ ಎಂದಿದ್ದಾರೆ. ತಾನು ಮಹಾತ್ಮ ಗಾಂಧಿಯವರ ಅಹಿಂಸೆಯ ಸಿದ್ಧಾಂತದ ಅನುಯಾಯಿಯಾಗಿದ್ದು, ಹಿಂಸೆಗೆ ಕರೆನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ
