CINE | ತೆಲುಗು ರಾಜ್ಯಗಳಲ್ಲಿ ದಾಖಲೆ ಬೆಲೆಯಲ್ಲಿ ಮಾರಾಟವಾದ ‘ಕಾಂತಾರ ಚಾಪ್ಟರ್ 1’ : ಸೇಲ್ ಆಗಿದ್ದೆಷ್ಟಕ್ಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್ 1’ ಇನ್ನೂ ತೆರೆಕಾಣದಿದ್ದರೂ ಈಗಾಗಲೇ ಭಾರೀ ಚರ್ಚೆಗೆ ಕಾರಣವಾಗಿದೆ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ವಿತರಣೆ ಹಕ್ಕುಗಳಿಗಾಗಿ ದೇಶದ ಪ್ರಮುಖ ವಿತರಕರು ಸ್ಪರ್ಧೆ ನಡೆಸುತ್ತಿದ್ದು, ವಿಶೇಷವಾಗಿ ತೆಲುಗು ರಾಜ್ಯಗಳಲ್ಲಿ ಈ ಸಿನಿಮಾ ದಾಖಲೆ ಮಟ್ಟದಲ್ಲಿ ಹಕ್ಕು ಮಾರಾಟಗೊಂಡಿದೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ‘ಕಾಂತಾರ ಚಾಪ್ಟರ್ 1’ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆ ಹಕ್ಕುಗಳನ್ನು ಬರೋಬ್ಬರಿ 100 ಕೋಟಿಗೆ ಮಾರಾಟ ಮಾಡಲಾಗಿದೆ. ಇದು ಯಾವುದೇ ತೆಲುಗು ರಾಜ್ಯಗಳಲ್ಲಿ ಮಾರಾಟವಾಗಿರುವ ಅತ್ಯಧಿಕ ಮೊತ್ತದ ಬೇರೆ ಭಾಷೆಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೂವರು ಪ್ರಮುಖ ವಿತರಣೆ ಪ್ರದೇಶವಾದ ಕೋಸ್ಟಲ್ ಆಂಧ್ರ, ಸೀಡೆಡ್ ಮತ್ತು ನಿಜಾಮ್ ಏರಿಯಾಗಳಲ್ಲಿ ಕ್ರಮವಾಗಿ 45 ಕೋಟಿ, 15 ಕೋಟಿ ಮತ್ತು 40 ಕೋಟಿ ಮೊತ್ತಕ್ಕೆ ಹಕ್ಕುಗಳು ವಿತರಕರಿಗೆ ಹಂಚಿಕೆಯಾಗಿವೆ.

2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಮೊದಲ ಚಿತ್ರವು ತೆಲುಗು ಭಾಷೆಯಲ್ಲೂ ಅದ್ಭುತ ಯಶಸ್ಸು ದಾಖಲಿಸಿತ್ತು. ಬಿಡುಗಡೆಯಾದ ಮೊದಲ ದಿನದಲ್ಲೇ 5 ಕೋಟಿ ಗಳಿಸಿದ ಈ ಸಿನಿಮಾ, 40 ದಿನಗಳಲ್ಲಿ 60 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಯಾವುದೇ ದೊಡ್ಡ ಹೈಪ್ ಇಲ್ಲದೇ ಅಷ್ಟೊಂದು ಗಳಿಸಿದ್ದರಿಂದ, ಇದೀಗ ನಿರ್ಮಾಪಕರು ‘ಚಾಪ್ಟರ್ 1’ ಮೂಲಕ ಮೂರು ಪಟ್ಟು ಗಳಿಕೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಸದ್ಯಕ್ಕೆ ತೆಲುಗು ರಾಜ್ಯಗಳ ಹಕ್ಕುಗಳನ್ನು ಹೊಂಬಾಳೆ ಫಿಲ್ಮ್ಸ್ ಮಾರಾಟ ಮಾಡಿದ್ದು, ಇನ್ನೂ ತಮಿಳುನಾಡು, ಕೇರಳ, ಹಿಂದಿ ಹಾಗೂ ಜಾಗತಿಕ ಹಕ್ಕುಗಳನ್ನು ಮಾರಾಟ ಮಾಡಬೇಕಾಗಿದೆ. ಈ ಹಕ್ಕುಗಳ ಬೆಲೆಯೂ ಇನ್ನೂ ಹೆಚ್ಚಿನ ಮಟ್ಟಕ್ಕೆ ಏರಲಿದೆ ಎಂಬ ಅಂದಾಜು ಇದೆ.

‘ಕಾಂತಾರ ಚಾಪ್ಟರ್ 1’ ಇನ್ನೂ ಬಿಡುಗಡೆಯಾಗದಿದ್ದರೂ, ಅದರ ಹಕ್ಕುಗಳ ಮಾರಾಟವೇ ಸಿನಿಮಾ ಭರ್ಜರಿ ಯಶಸ್ಸಿನ ಮುನ್ಸೂಚನೆ ನೀಡುತ್ತಿದೆ. ತೆಲುಗು ರಾಜ್ಯಗಳಲ್ಲಿ ನೂರುಕೋಟಿ ಮೊತ್ತ ಕೊಟ್ಟಿರುವುದು ಕನ್ನಡ ಸಿನಿಮಾಗೆ ಹೊಸ ಮೈಲ್‌ಸ್ಟೋನ್ ಆಗಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ದೇಶವ್ಯಾಪಿ ದಾಖಲೆ ಬರೆದರೆ ಆಶ್ಚರ್ಯವಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!