ಹೊಸದಿಗಂತ ವರದಿ, ಶಿವಮೊಗ್ಗ:
ನನ್ನನ್ನು ಶ್ವಾನಕ್ಕೆ ಹೋಲಿಸಿರುವ ಸಿ.ಎಂ. ಇಬ್ರಾಹಿಂಗೆ ನಾಯಿಗೆ ಇರುವ ನಿಷ್ಠೆ, ಪ್ರಾಮಾಣಿಕತೆ ಆತನಿಗೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಪಕ್ಷದಲ್ಲಿದ್ದ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಯೋಜನ ಮಂಡಳಿ ಉಪಾಧ್ಯಕ್ಷನನ್ನಾಗಿ, ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದರೂ ನಿಷ್ಠೆ ಇಲ್ಲ. ಲೂಟಿ ಹೊಡೆದು ಸಾಲ ತೀರಿಸಿಕೊಳ್ಳಲು, ಮಕ್ಕಳ ಮದುವೆ ಮಾಡಲು ಇವರನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನ ನೀಡಬೇಕಿತ್ತೆ ಎಂದು ಪ್ರಶ್ನಿಸಿದರು.
ಇರುವ ಪಕ್ಷಗೂ ನಿಷ್ಠೆ ಇಲ್ಲ, ತಾನಿರುವ ಊರಿಗೂ ನಿಷ್ಠೆ ಇಲ್ಲ. ತಾನು ಹುಟ್ಟಿದ ಸಮಾಜಕ್ಕೂ ನಿಷ್ಠೆ ಇಲ್ಲ. ತನ್ನ ಸಮಾಜದ ವಕ್ಫ್ಆಸ್ತಿ ಕಬಳಿಕೆ ಮಾಡಿಕೊಂಡು 1975ರಿಂದ ಅದರಲ್ಲಿ ಫಲ ಉಣ್ಣುತ್ತಿದ್ದಾರೆ. ಎಲ್ಲಿಗೆ ಹೋಗುತ್ತಾರೋ ಅಲ್ಲೆಲ್ಲಾ ಭ್ರಷ್ಟಾಚಾರ ಮಾಡಿಯೇ ಜೀವನ ನಡೆಸುತ್ತಾರೆ. ನನ್ನ ಗಂಡಸ್ಥನದ ಬಗ್ಗೆ ಪ್ರಶ್ನೆ ಮಾಡುವುದು ಬೇಡ. ಗಂಡಸ್ಥನ ಯಾರಿಗೆ ಗೊತ್ತಿರಬೇಕೋ ಅವರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಒಬ್ಬ ಮನುಷ್ಯನ ವ್ಯಕ್ತಿತ್ವ ಆತನ ನಾಲಿಗೆಯಲ್ಲಿಯೇ ಬಿಂಬಿತವಾಗುತ್ತದೆ. ಹೀಗಾಗಿ ಇಬ್ರಾಹಿಂ ವ್ಯಕ್ತಿತ್ವ ಕೂಡ ಅವರ ನಾಲಿಗೆಯಲ್ಲಿ ವ್ಯಕ್ತವಾಗುತ್ತಿದೆ. ರೋಲಿಂಗ್ಸ್ ವಾಚ್ ಹಗರಣ, ಮಿಲ್ ಹಗರಣ, ವಕ್ಫ್ಆಸ್ತಿ ಕಬಳಿಗೆ ಇವೆಲ್ಲಾ ಅವರ ಭ್ರಷ್ಟಾಚಾರದ ಮುಖಗಳಾಗಿವೆ. ಅವರಿಗೆ ದಮ್ಮಿದ್ದರೆ ಸಾರ್ವಜನಿಕ ಚರ್ಚೆಗೆ ಬರಲಿ ಎಂದ ಅವರು, ಹೋದ ಕಡೆಯಲ್ಲೆಲ್ಲಾ ಸೀಮೆ ಎಣ್ಣೆ, ಬೆಂಕಿ ಪೊಟ್ಟಣ ಕೈಯಲ್ಲಿ ಹಿಡಿದೇ ಹೋಗುವ ಜಾಯಮಾನ ಅವರದ್ದೆಂದು ಹರಿಹಾಯ್ದರು.
