ಹೊಸದಿಗಂತ ಡಿಜಿಟಲ್ ಡೆಸ್ಕ್ :
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಮುಡಿಪು ಸಮೀಪ ರಸ್ತೆ ಬದಿ ನಿಂತಿದ್ದ ಎಂಟನೇ ತರಗತಿ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಬೋಳಿಯಾರು ಭಟ್ರಬೈಲು ನಿವಾಸಿ ಹರಿಶ್ಚಂದ್ರ -ಅರುಣಾಕ್ಷಿ ದಂಪತಿ ಪುತ್ರ ಕಾರ್ತಿಕ್ (14) ಮೃತ ಬಾಲಕ. ಮುಡಿಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದನು. ಶಾಲೆ ಬಿಟ್ಟು ಮನೆಗೆ ತೆರಳಲು ರಸ್ತೆಬದಿಯಲ್ಲಿ ನಿಂತಿದ್ದ ಬಾಲಕನಿಗೆ ಮುಡಿಪು ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಕಾರು ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಬಾಲಕನಿಗೆ ಡಿಢಿಕ್ಕಿ ಹೊಡೆದ ಕಾರು ನಂತರ ಸಮೀಪದಲ್ಲೇ ಇದ್ದ ರಿಕ್ಷಾಗೂ ಡಿಕ್ಕಿ ಹೊಡೆದಿದ್ದಾನೆ. ಕಾರು ಮಾಲೀಕ ಟ್ರಯಲ್ ನೋಡಲು ಇನ್ನೋರ್ವ ಗೆಳೆಯನಿಗೆ ಕಾರು ನೀಡಿದ್ದ ಸಂದರ್ಭ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಂಗಳೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
