CINE | ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ: 400 ಕೋಟಿ ರೂ. ಕ್ಲಬ್‌ಗೆ ಸೇರಿಕೊಂಡ ‘ಕೂಲಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಸಿನಿಪರಂಪರೆಯಲ್ಲಿ ಬಹಳ ನಿರೀಕ್ಷೆ ಮೂಡಿಸಿದ್ದ ಲೋಕೇಶ್ ಕನಕರಾಜ್ ನಿರ್ದೇಶನದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ, ಬಾಕ್ಸ್‌ಆಫೀಸ್‌ನಲ್ಲಿ ಸಿನಿಮಾ ತೀವ್ರ ಯಶಸ್ಸು ಸಾಧಿಸುತ್ತಿದ್ದು, ಕೇವಲ ಐದು ದಿನಗಳಲ್ಲೇ 400 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿದೆ.

ರಿಲೀಸ್ ಆದ ಮೊದಲ ದಿನವೇ 151 ಕೋಟಿ ರೂ. ಗಳಿಸಿ ಈ ವರ್ಷದ ಅಗ್ರಸ್ಥಾನಕ್ಕೇರಿದ ಸಿನಿಮಾ, ಈಗಾಗಲೇ 404 ಕೋಟಿ ರೂ.ಗಳ ಒಟ್ಟು ಕಲೆಕ್ಷನ್ ದಾಖಲಿಸಿದೆ. ಇದರಲ್ಲಿ 200 ಕೋಟಿ ರೂ. ಶೇರ್ ಆಗಿದೆ. ವಾರ್ 2 (ಹೃತಿಕ್ ರೋಷನ್ ಮತ್ತು ಎನ್‌ಟಿಆರ್ ನಟನೆಯ) ಚಿತ್ರದಿಂದ ಬಂದ ಪೈಪೋಟಿಯ ನಡುವೆಯೂ ‘ಕೂಲಿ’ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ.

ಸಿನಿಮಾದಲ್ಲಿ ದೇವಾ (ರಜನಿಕಾಂತ್) ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತಾನೆ. ಆದರೆ ತನ್ನ ಆಪ್ತ ಗೆಳೆಯ ರಾಜಶೇಖರ್ (ಸತ್ಯರಾಜ್) ಅಸಹಜವಾಗಿ ಸಾವನ್ನಪ್ಪಿದ ನಂತರ ದೇವಾ ತನಿಖೆಗೆ ಮುಂದಾಗುತ್ತಾನೆ. ಆತನ ಮಗಳು ಪ್ರೀತಿ (ಶ್ರುತಿ ಹಾಸನ್) ಮತ್ತು ಕುಟುಂಬವೂ ಅಪಾಯದಲ್ಲಿದೆ ಎಂದು ತಿಳಿದಾಗ, ಅವರನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊರುತ್ತಾನೆ. ಈ ನಡುವೆ, ಸೈಮನ್ (ನಾಗಾರ್ಜುನ), ದಯಾಳ್ (ಸೌಬಿನ್ ಶಾಹಿರ್) ಮತ್ತು ದಹಾ (ಆಮೀರ್ ಖಾನ್) ಪಾತ್ರಗಳ ಸುತ್ತ ಕಥೆ ಕುತೂಹಲ ಮೂಡಿಸುತ್ತದೆ.

ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತಮಿಳು ಆವೃತ್ತಿ ಆರು ವಾರಗಳಲ್ಲಿ ಲಭ್ಯವಾಗಲಿದ್ದು, ಹಿಂದಿ ಆವೃತ್ತಿ ಎಂಟು ವಾರಗಳ ಬಳಿಕ ಪ್ರೇಕ್ಷಕರಿಗೆ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!