ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು: ನಾಳೆ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ ಎಂದ ವಿಜಯೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ್ದ ಅನುಮೋದನೆಯನ್ನು ಹೈಕೋರ್ಟ್‌ ಎತ್ತಿಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮೈಸೂರು ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸಬೇಕೆಂದು ಆದೇಶ ನೀಡಿದೆ.

ಈ ನಡುವೆ ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಸಿಎಂ ರಾಜೀನಾಮೆಗೆ ಆಗ್ರಹಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ. ಯಾವುದೇ ತನಿಖೆಗೆ ಸಿದ್ಧ ಎಂದು ಸಿಎಂ ಹೇಳಿದ್ದಾರೆ. ಈಗ ಸಿದ್ದರಾಮಯ್ಯ ತನಿಖೆಗೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

ತಕ್ಷಣ ಎಫ್​ಐಆರ್​ ದಾಖಲಿಸಿ ತನಿಖೆ ಮಾಡಬೇಕು. ಲೋಕಾಯುಕ್ತ ಪೊಲೀಸರಿಂದ ನ್ಯಾಯಯುತ ತನಿಖೆ ಅಸಾಧ್ಯ. ಹೀಗಾಗಿ ಸಿಬಿಐನಿಂದಲೇ ತನಿಖೆ ಆಗಬೇಕು. ಸಿಬಿಐ ತನಿಖೆಗೆ ಆದೇಶ ಮಾಡಿದರೆ ಗೌರವ ಮತ್ತಷ್ಟು ಹೆಚ್ಚಾಗುತ್ತೆ ಎಂದಿದ್ದಾರೆ.

ಭಂಡತನ ಬಿಟ್ಟು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ರಾಜ್ಯದ ಸಿಎಂ ಸಿದ್ದರಾಮಯ್ಯ ಇಂದು ಬೆತ್ತಲಾಗಿದ್ದಾರೆ. ಬಿಜೆಪಿ ಭ್ರಷ್ಟರ ಪಕ್ಷ, ನಾವು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇ ಅಂತಾ ಹೇಳಿ ಅಧಿಕಾರಕ್ಕೆ ಬಂದರು. ವಾಲ್ಮೀಕಿ ನಿಗಮದ ತನಿಖೆ ತಾರ್ಕಿಕ ಅಂತ್ಯಕ್ಕೆ ಹೋದರೆ ಹೈ ಕಮಾಂಡ್ ಬುಡಕ್ಕೆ ಬರುತ್ತದೆ ಅಂತಾ ಕಾಂಗ್ರೆಸ್ ಹೈಕಮಾಂಡ್​ಗೆ ಗೊತ್ತಿದೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಭ್ರಷ್ಟ ಸಿಎಂ ಬೆನ್ನಿಗೆ ನಿಲ್ಲುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!