ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂಬತ್ತು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆ ಪೂರ್ಣಗೊಂಡಿದ್ದು, ಏಪ್ರಿಲ್ 27 ರಂದು ಗೃಹಪ್ರವೇಶ ನಡೆಯಲಿದೆ.
ಕಾರ್ಯಕರ್ತನ ನೆರವಿಗೆ ಬಂದ ಭಾರತೀಯ ಜನತಾ ಪಾರ್ಟಿ ವತಿಯಿಂದ ನಿರ್ಮಾಣಗೊಂಡ ಸುಂದರ ಮನೆ ‘ ಪ್ರವೀಣ್ ನಿಲಯ’ ಅತ್ಯಂತ ಕ್ಷಿಪ್ರಗತಿಯಲ್ಲಿ ಪೂರ್ಣಗೊಂಡಿದೆ.
ಏ. 27ರಂದು ಬೆಳಿಗ್ಗೆ ಗಣಪತಿ ಹವನ ಹಾಗೂ ಸತ್ಯನಾರಾಯಣ ದೇವರ ಪೂಜೆಯೊಂದಿಗೆ ಗೃಹ ಪ್ರವೇಶ ನೆರವೇರಲಿದೆ. ಬೆಳಗ್ಗೆ 11 ಗಂಟೆಗೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ಹಾಗೂ ರಾತ್ರಿ 7 ರಿಂದ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು (30 ) ಅವರನ್ನು 2022 ಜುಲೈ 26 ರಂದು ರಾತ್ರಿ ದುಷ್ಕರ್ಮಿಗಳು ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅವರ ಅಕ್ಷಯ ಚಿಕನ್ ಸೆಂಟರ್ ಬಳಿ ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದರು.
ಈಘಟನೆಯಿಂದ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ತತ್ತರಿಸಿಹೋಗಿದ್ದರು. ಅಸಹನೆ ಮಿತಿಮೀರಿ ಅವರು ಸರಕಾರದ ವಿರುದ್ಧ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದ ಮುಖ್ಯಮಂತ್ರಿ ಸಹಿತ ಹಲವು ಮಂತ್ರಿಗಳು, ನಾಯಕರು ಪ್ರವೀಣ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಹಾಗೂ ಸ್ಥಳೀಯ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದರು.
ಪ್ರವೀಣ್ ನೆಟ್ಟಾರು ಸ್ವಂತ ಮನೆ ನಿರ್ಮಿಸುವ ತಯಾರಿಯಲ್ಲಿದ್ದರು. ಆದರೆ ಕನಸು ನನಸಾಗುವ ಮುನ್ನವೇ ಅವರು ದುಷ್ಕರ್ಮಿಗಳಿಗೆ ಬಲಿಯಾದರು. ಅವರ ಕನಸನ್ನು ನನಸು ಮಾಡಲು ಬಿ.ಜೆ.ಪಿ. ಪಕ್ಷ ಮುಂದೆ ಬಂತು.ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ 2700 ಚದರ ಅಡಿಯ ಸುಂದರವಾದ ಸುಸಜ್ಜಿತ ಮನೆಯ ಸಂಪೂರ್ಣ ವೆಚ್ಚವನ್ನು ಪಕ್ಷದ ವತಿಯಿಂದ ಭರಿಸಲಾಗಿದ್ದು, ಕೇವಲ ಎಂಟು ತಿಂಗಳಲ್ಲಿ ದಿ.ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆ ಸಿದ್ಧವಾಗಿದೆ.