ಹೊಸದಿಗಂತ ವರದಿ ಕೊಪ್ಪಳ:
ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿ ಅಧೋಗತಿಯಾಗಿದ್ದು, ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಅಧಿಕಾರಿಗಳ ವಿರುದ್ಧ ತಿಂಗಳ ಅಂತರದಲ್ಲಿ ವಿವಿಧ ಗ್ರಾಮಗಳ ಜನರು 9 ಪ್ರತಿಭಟನೆ ನಡೆಸಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿಯೇ ನಂ.1 ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ ಶಾಸಕ ರಾಘವೇಂದ್ರ ಹಿಟ್ನಾಳ್ ಕ್ಷೇತ್ರದಲ್ಲೇ ಸರಿಯಾದ ರಸ್ತೆಗಳಿಲ್ಲ. 10 ವರ್ಷ ಶಾಸಕರಾದರೂ, ರಸ್ತೆಗಳ ಸುಧಾರಣೆಯಲ್ಲಿ ಹಿಂದುಳಿದಿದ್ದಾರೆ ಎಂಬುದಕ್ಕೆ ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳೇ ಸಾಕ್ಷಿಯಾಗಿವೆ.
ಚಿಕ್ಕಸಿಂಧೋಗಿಯಿಂದ ಹಿರೇಸಿಂಧೋಗಿ ವರೆಗಿನ ರಸ್ತೆ, ಮೈನಳ್ಳಿಯಿಂದ ಅಳವಂಡಿ ರಸ್ತೆ, ಭಾಗ್ಯನಗರದ ರೈಲ್ವೆ ಮೇಲ್ಸೇತುವೆ ಹೀಗೆ ವಿವಿಧ ಗ್ರಾಮಗಳ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದರೂ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ಯಾರೇ ಎನ್ನುತ್ತಿರುವುದು ಅವರ ಭಂಡತನಕ್ಕೆ ಸಾಕ್ಷಿಯಾಗಿದೆ.
ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ:
ಕೊಪ್ಪಳ ತಾಲೂಕಿನ ಮುನಿರಾಬಾದ ಗ್ರಾಮದಲ್ಲಿ ರಸ್ತೆ ದುರಸ್ತಿ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ, 1 ರೂ. ಬಿಡುಗಡೆ ಮಾಡಿಲ್ಲ ಎಂದು ಭಿಕ್ಷೆ ಬೇಡುವ ಮುಖಾಂತರ ಸ್ಥಳೀಯರು ಪ್ರತಿಭಟನೆ ನಡೆಸಿದರು. ಅಳವಂಡಿ ನೆಲೋಗಿಪೂರ ಗ್ರಾಮದ ರಸ್ತೆಯ ಮಧ್ಯ ಹರಿಯುವ ಹಿರೇಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:
ರಸ್ತೆ ದುರಸ್ತಿ ಪಡಿಸಲು ಆಗ್ರಹಿಸಿ ಜನರು ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ಹೊರ ಹಾಕುತ್ತಿದ್ದಾರೆ. ರಸ್ತೆಗಳ ಫೋಟೋಗಳನ್ನು ಹರಿಬಿಡುತ್ತಾ, ಶಾಸಕ ಹಿಟ್ನಾಳ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಉತ್ತಮ ನಾಯಕನ ಆಯ್ಕೆ ಆಗಬೇಕಿದೆ ಎಂದು ಬರೆದುಕೊಳ್ಳುತ್ತಿದ್ದಾರೆ.
