Asia Cup | ಭಾರತ ತಂಡ ಘೋಷಣೆಗೆ ಕೌಂಟ್ ಡೌನ್ ಶುರು: ಇಂದು ನಿರ್ಧಾರವಾಗಲಿದೆ ಆಟಗಾರರ ಭವಿಷ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಏಷ್ಯಾ ಕಪ್ ಸೆಪ್ಟೆಂಬರ್ 9ರಿಂದ ಆರಂಭಗೊಳ್ಳಲಿದ್ದು, ಟೂರ್ನಮೆಂಟ್‌ಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಇಂದು ಅಧಿಕೃತವಾಗಿ ಘೋಷಿಸಲಿದೆ. ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಸಭೆಯ ನಂತರ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹಾಗೂ ತಂಡದ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ತಂಡವನ್ನು ಅನೌನ್ಸ್ ಮಾಡುವ ನಿರೀಕ್ಷೆ ಇದೆ. ಇದೇ ವೇಳೆ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಭಾರತೀಯ ಮಹಿಳಾ ತಂಡವನ್ನೂ ಆಯ್ಕೆ ಮಾಡಲಾಗುತ್ತಿದೆ.

ಮಧ್ಯಾಹ್ನ 1:30ಕ್ಕೆ ಪುರುಷರ ತಂಡದ ಆಯ್ಕೆ ಸಭೆ ನಡೆಯಲಿದ್ದು, ಬಳಿಕ 3:30ಕ್ಕೆ ಮಹಿಳಾ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಭೆಯ ನಂತರ ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಇಬ್ಬರು ನಾಯಕರೂ ಮಾಧ್ಯಮದ ಮುಂದೆ ಮಾತನಾಡಲಿದ್ದಾರೆ. ಪುರುಷರ ತಂಡದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಿದ್ಧತೆ ಮಾಡುವ ಜೊತೆಗೆ ಏಷ್ಯಾ ಕಪ್‌ಗೂ ಬಲಿಷ್ಠ ತಂಡವನ್ನು ನೀಡಲು ಚರ್ಚೆ ಸಾಗುವ ಸಾಧ್ಯತೆ ಇದೆ.

ಆಯ್ಕೆ ಸಮಿತಿಯ ನಿರ್ಧಾರದಿಂದ ಹಲವು ಆಟಗಾರರ ಭವಿಷ್ಯ ತೀರ್ಮಾನವಾಗಲಿದೆ. ಶುಭ್‌ಮನ್ ಗಿಲ್, ರಿಂಕು ಸಿಂಗ್, ಕೆ.ಎಲ್. ರಾಹುಲ್ ಮೊದಲಾದವರ ಹೆಸರುಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿಗಳ ಪ್ರಕಾರ, ಜೈಸ್ವಾಲ್ ಮತ್ತು ಗಿಲ್ ಇಬ್ಬರನ್ನೂ ಕೈಬಿಡುವ ಸಾಧ್ಯತೆ ಇದೆ. ಆರಂಭಿಕರಾಗಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಹೆಸರುಗಳು ಮುಂದಿರುತ್ತವೆ. ಮೂರನೇ ಸ್ಥಾನಕ್ಕೆ ಜೈಸ್ವಾಲ್ ಸ್ಪರ್ಧೆ ನೀಡುತ್ತಿದ್ದರೂ, ಅಂತಿಮವಾಗಿ ಅವಕಾಶ ಸಿಗದಿರಬಹುದೆಂಬ ಅನುಮಾನ ಉಳಿದಿದೆ.

ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಇಬ್ಬರಿಗೂ ಅವಕಾಶ ಸಿಗುವ ನಿರೀಕ್ಷೆಯಿದ್ದು, ಜಿತೇಶ್ ಶರ್ಮಾ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇತ್ತೀಚಿನ ಐಪಿಎಲ್‌ನಲ್ಲಿ ಜಿತೇಶ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ದಾಳಿಯನ್ನು ಮುನ್ನಡೆಸಲಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ಸ್ಥಾನ ಕೂಡ ಅನುಮಾನದಲ್ಲಿದೆ.

2025ರ ಏಷ್ಯಾ ಕಪ್ ತಂಡದ ಆಯ್ಕೆ ಕ್ರೀಡಾಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಟಿ20 ಸ್ವರೂಪದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರರಿಗೆ ಆದ್ಯತೆ ನೀಡಲು ಆಯ್ಕೆ ಸಮಿತಿ ಮುಂದಾಗಿದೆ. ಇಂದಿನ ಘೋಷಣೆಯ ನಂತರ ಯಾವ ಆಟಗಾರರಿಗೆ ಅವಕಾಶ ಸಿಕ್ಕಿದೆ, ಯಾರಿಗೆ ಸ್ಥಾನ ತಪ್ಪಿದೆ ಎಂಬುದು ಬಹಿರಂಗವಾಗಲಿದೆ. ಈ ನಿರ್ಧಾರ ಮುಂಬರುವ ಏಷ್ಯಾ ಕಪ್ ಮಾತ್ರವಲ್ಲ, ಮುಂದಿನ ಐಸಿಸಿ ಟೂರ್ನಮೆಂಟ್‌ಗಳಿಗೂ ಮಹತ್ವದ ಪಾತ್ರ ವಹಿಸುವುದರಲ್ಲಿ ಸಂಶಯವೇ ಇಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!