ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ‘ಕಾಂತಾರ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಎಂಬ ಕಂಬಳ ಕೋಣ ಸಾವನ್ನಪ್ಪಿದೆ. ಕರಾವಳಿ ಸಂಸ್ಕೃತಿ ಮತ್ತು ಕಂಬಳದ ಮೂಲಕ ಜನಮನ ಗೆದ್ದ ಈ ಸಿನಿಮಾದಲ್ಲಿ, ಅಪ್ಪು ಹಾಗೂ ಕಾಲಾ ಎಂಬ ಎರಡು ಕೋಣಗಳನ್ನು ಬಳಸಲಾಗಿತ್ತು.
ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ಕಂಬಳ ಓಡಿಸಲು ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರ ಬಳಿ ತರಬೇತಿ ಪಡೆದಿದ್ದರು. ಈ ತರಬೇತಿಯಲ್ಲಿ ಅಪ್ಪು ಮತ್ತು ಕಾಲಾ ಪ್ರಮುಖ ಪಾತ್ರವಹಿಸಿದ್ದವು. ಚಿತ್ರೀಕರಣಕ್ಕೂ ಮೊದಲು ಆರಂಭವಾದ ಈ ಬಾಂಧವ್ಯ ಚಿತ್ರದ ವೇಳೆಯಲ್ಲೂ ಮುಂದುವರಿದಿತ್ತು.
ಅಪ್ಪು ಕೋಣದ ನಿಧನದ ಸುದ್ದಿ, ಅದರ ಮಾಲೀಕರು ಮತ್ತು ಕಂಬಳ ಪ್ರೇಮಿಗಳಿಗೆ ದುಃಖ ತಂದಿದೆ. ನಿಜ ಜೀವನದಲ್ಲೂ ಅಪ್ಪು ಹಾಗೂ ಕಾಲಾ ಹಲವಾರು ಪ್ರಶಸ್ತಿಗಳನ್ನು ಗೆದ್ದ ಚಾಂಪಿಯನ್ ಕೋಣಗಳು. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ, ಕುಂದಾಪುರ ಹಾಗೂ ಬೆಂಗಳೂರು ಕಂಬಳಗಳಲ್ಲಿ ಅನೇಕ ಬಾರಿ ಪ್ರಥಮ ಸ್ಥಾನ ಗಳಿಸಿದ್ದವು.
‘ಕಾಂತಾರ’ ಯಶಸ್ಸಿನ ನಂತರ, ರಿಷಬ್ ಶೆಟ್ಟಿ ‘ಕಾಂತಾರ: ಚಾಪ್ಟರ್ 1’ ಚಿತ್ರದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದಲ್ಲಿಯೂ ಕಂಬಳದ ದೃಶ್ಯಗಳು ಇರಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಚಾಪ್ಟರ್ 1 ಭಾಗಕ್ಕಾಗಿ ರಿಷಬ್ ಮೂರು ವರ್ಷಗಳ ಶ್ರಮವನ್ನೂ ಹೂಡಿದ್ದಾರೆ.