ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜಿತ್ ಪವಾರ್ ಬಂಡಾಯ ಎದ್ದ ಬಳಿಕ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP)ದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಪಕ್ಕಾ ಆಗಿದ್ದು, ಇದೀಗ ಶರದ್ ಪವಾರ್ (Sharad Pawar) ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪ್ರಫುಲ್ ಪಟೇಲ್ (Praful Patel) ಮತ್ತು ಸುನೀಲ್ ತಟ್ಕರೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.
ಪಟೇಲ್ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದು, ತಟ್ಕರೆ ಎನ್ಸಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು
. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ನಾನು ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಎನ್ಸಿಪಿ ಪಕ್ಷದ ಸದಸ್ಯರ ನೋಂದಣಿಯಿಂದ ಸುನೀಲ್ ತಟ್ಕರೆ ಮತ್ತು ಪ್ರಫುಲ್ ಪಟೇಲ್ ಅವರ ಹೆಸರನ್ನು ತೆಗೆದುಹಾಕಲು ಆದೇಶಿಸುತ್ತೇನೆ ಎಂದು ಶರದ್ ಪವಾರ್ ಟ್ವೀಟ್ ಮಾಡಿದ್ದಾರೆ.
ಇತ್ತ ಎನ್ಸಿಪಿಯಿಂದ ವಜಾಗೊಂಡಿರುವ ಸುನೀಲ್ ತಟ್ಕರೆ ಅವರನ್ನು ಪಕ್ಷದ ರಾಜ್ಯ ಮುಖ್ಯಸ್ಥರನ್ನಾಗಿ ಪ್ರಫುಲ್ ಪಟೇಲ್ ನೇಮಿಸಿದ ಬೆನ್ನಲ್ಲೇ ಶರದ್ ಪವಾರ್ ಈ ಕ್ರಮ ಕೈಗೊಂಡಿದ್ದಾರೆ.
ಈಗಾಗಲೇ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಎನ್ಸಿಪಿ ಮೂರು ಪಕ್ಷದ ಮುಖಂಡರಾದ ವಿಭಾಗೀಯ ಎನ್ಸಿಪಿ ಮುಖ್ಯಸ್ಥ ನರೇಂದ್ರ ರಾಥೋಡ್, ಅಕೋಲಾ ನಗರ ಜಿಲ್ಲಾ ಮುಖ್ಯಸ್ಥ ವಿಜಯ್ ದೇಶಮುಖ್ ಮತ್ತು ರಾಜ್ಯ ಸಚಿವ ಶಿವಾಜಿರಾವ್ ಗರ್ಜೆ ಅವರನ್ನು ವಜಾಗೊಳಿಸಲಾಗಿದೆ.
