ಅಡುಗೆ ಮಾಡುವುದಕ್ಕಿಂತಲೂ ಅಡುಗೆಮನೆಯನ್ನು ಕ್ಲೀನ್ ಮಾಡುವುದು ಬಹುತೇಕ ಜನರಿಗೆ ಹೆಚ್ಚು ಕಷ್ಟದ ಕೆಲಸವಾಗಿ ಅನಿಸುತ್ತದೆ. ವಿಶೇಷವಾಗಿ ಕೆಲಸದ ಒತ್ತಡದ ನಂತರ ಅಥವಾ ಮನೆಗೆ ಬಂದು ವಿಶ್ರಾಂತಿ ಪಡೆಯಬೇಕಾದಾಗ ಅಡುಗೆಮನೆಯನ್ನು ಸ್ವಚ್ಛಗೊಳಿಸುವುದು ತಲೆನೋವಾಗಿ ಪರಿಣಮಿಸುತ್ತದೆ. ಆದರೆ ಹೆಚ್ಚು ಸಮಯ ವ್ಯಯಿಸದೆ ಕೆಲವು ಸರಳ ಟಿಪ್ಸ್ ಅನುಸರಿಸಿದರೆ ಅಡುಗೆಮನೆ ಸ್ವಚ್ಛವಾಗಿ ತೋರಿಸುತ್ತದೆ.
ಮರದ ಬೋರ್ಡ್ ಹಾಗೂ ಪ್ಲಾಸ್ಟಿಕ್ ಕಟಿಂಗ್ ಬೋರ್ಡ್ ಕ್ಲೀನ್ ಮಾಡುವುದು
ತರಕಾರಿ ಹೆಚ್ಚಲು ಬಳಸುವ ಮರದ ಬೋರ್ಡ್‌ಗಳ ಮೇಲೆ ಕಲೆಗಳು ಅಂಟಿದರೆ, ಆ ಭಾಗಕ್ಕೆ ಉಪ್ಪು ಸಿಂಪಡಿಸಿ, ನಿಂಬೆ ಹಣ್ಣಿನಿಂದ ಉಜ್ಜಿದರೆ ಕಲೆಗಳು ದೂರವಾಗುತ್ತವೆ.
ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ಗಳನ್ನು ಕ್ಲೀನ್ ಮಾಡಲು ಅಡುಗೆ ಸೋಡಾ ಮತ್ತು ವಿನೆಗರ್ ಮಿಶ್ರಣ ಹಚ್ಚಿ, ನಂತರ ನಿಂಬೆ ರಸದಿಂದ ತೊಳೆಯುವುದು ಪರಿಣಾಮಕಾರಿ.
ಮಡಿಕೆ ಹಾಗೂ ಹರಿವಾಣಗಳ ಕಲೆ ನಿವಾರಣೆ
ಮಡಿಕೆ ಅಥವಾ ಹರಿವಾಣಗಳ ಮೇಲೆ ಬಿದ್ದ ಕಠಿಣ ಕಲೆಗಳನ್ನು ತೆಗೆದುಹಾಕಲು ನಿಂಬೆ, ಅಡುಗೆ ಸೋಡಾ ಮತ್ತು ವಿನೆಗರ್ ಸೇರಿಸಿ ಮಿಶ್ರಣ ತಯಾರಿಸಿ, ಅದನ್ನು ಸ್ವಲ್ಪ ಕುದಿಸಿ ಹಚ್ಚಿದರೆ ಕಲೆಗಳು ಸರಳವಾಗಿ ಮಾಯವಾಗುತ್ತವೆ.
ಜೇನುತುಪ್ಪ ಅಥವಾ ಸಿರಪ್‌ನಂತಹ ಜಿಗುಟಾದ ಪದಾರ್ಥಗಳು ಅಂಟದಂತೆ ತಡೆಯಲು, ಅವನ್ನು ಬಳಸುವ ಮೊದಲು ಅಳತೆ ಪಾತ್ರೆಗಳ ಮೇಲೆ ಸ್ವಲ್ಪ ಅಡುಗೆ ಎಣ್ಣೆ ಹಚ್ಚುವುದು ಉತ್ತಮ ವಿಧಾನ.
ಸಿಂಕ್ ಮತ್ತು ಮೈಕ್ರೋವೇವ್ ಕ್ಲೀನ್ ಮಾಡುವ ಸರಳ ಮಾರ್ಗ
ಸಿಂಕ್ ಬ್ಲಾಕ್ ಆದಾಗ ಅಡುಗೆ ಸೋಡಾ ಸಿಂಪಡಿಸಿ, ಮೇಲಿಂದ ವಿನೆಗರ್ ಸುರಿದು 5 ನಿಮಿಷ ಬಿಟ್ಟು, ಬಳಿಕ ಬಿಸಿನೀರು ಹಾಕಿದರೆ ಸಮಸ್ಯೆ ಪರಿಹಾರವಾಗುತ್ತದೆ.
ಮೈಕ್ರೋವೇವ್ ಶೀಘ್ರ ಕ್ಲೀನ್ ಮಾಡಲು ಒಂದು ಬಟ್ಟಲಿನಲ್ಲಿ ವಿನೆಗರ್ ಹಾಗೂ ಅರ್ಧ ನಿಂಬೆ ಸೇರಿಸಿ, ಅದನ್ನು ಒಂದು ನಿಮಿಷ ಮೈಕ್ರೋವೇವ್‌ನಲ್ಲಿ ಇಟ್ಟು ಬಳಿಕ ಒಳಭಾಗವನ್ನು ಸ್ವಚ್ಛಗೊಳಿಸಬಹುದು.
ಈ ಟಿಪ್ಸ್ ಅಡುಗೆಮನೆಯನ್ನು ಸ್ವಚ್ಛವಾಗಿಡುವುದರ ಜೊತೆಗೆ ಸಮಯ ಹಾಗೂ ಹಣ ಉಳಿಸಲು ಸಹ ಸಹಾಯಕವಾಗುತ್ತವೆ. ಕೇವಲ ಕೆಲವು ಸುಲಭ ಸಲಹೆಗಳನ್ನು ಪಾಲಿಸಿದರೆ ಅಡುಗೆಮನೆ ಯಾವಾಗಲೂ ಚಕಚಕನೆ ಮಿನುಗುತ್ತದೆ ಮತ್ತು ಅಡುಗೆ ಮಾಡುವ ಉತ್ಸಾಹವೂ ಹೆಚ್ಚುತ್ತದೆ.