ರೋಹಿತ್–ಕೊಹ್ಲಿ BCCI ರಾಜಕೀಯಕ್ಕೆ ಬಲಿಯಾಗಿದ್ದಾರೆ: ಬಾಂಬ್ ಸಿಡಿಸಿದ ಕರ್ಸನ್ ಘಾವ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇತ್ತೀಚೆಗೆ ಎದುರಾದ ದೊಡ್ಡ ಆಘಾತವೆಂದರೆ ಅದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ವಿದಾಯ ಹೇಳಿರುವುದು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ಇಬ್ಬರೂ ಆಟಗಾರರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ನಿವೃತ್ತಿ ಘೋಷಿಸಿದ್ದು, ವಿಶೇಷವಾಗಿ ಕೊಹ್ಲಿಯ ನಿರ್ಧಾರ ಅಭಿಮಾನಿಗಳ ನಿರೀಕ್ಷೆಗೆ ಹೊರತಾಗಿತ್ತು. ಏಕೆಂದರೆ ಇನ್ನೂ ಕೆಲವು ವರ್ಷಗಳ ಕಾಲ ಟೆಸ್ಟ್‌ನಲ್ಲಿ ಆಡಬಹುದಾದ ಸಾಮರ್ಥ್ಯ ಅವರಲ್ಲಿದೆ ಎಂದು ತಜ್ಞರು ಹೇಳುತ್ತಿದ್ದರು.

ಈ ಬಗ್ಗೆ ಮಾಜಿ ವೇಗಿ ಕರ್ಸನ್ ಘಾವ್ರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಈ ನಿರ್ಧಾರದ ಹಿಂದಿರುವುದು ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ಆಂತರಿಕ ರಾಜಕೀಯವೇ ಎಂದು ಹೇಳಿದ್ದಾರೆ. “ವಿರಾಟ್ ಕೊಹ್ಲಿ ಇನ್ನೂ ಕನಿಷ್ಠ ಎರಡು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಬಹುದಾಗಿತ್ತು. ಆದರೆ ಅವರಿಗೆ ವಿದಾಯ ಪಂದ್ಯ ನೀಡದಿರುವುದು ವಿಷಾದನೀಯ. ಯಾರೋ ಒತ್ತಡ ಹಾಕಿರುವುದರಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಘಾವ್ರಿ ಹೇಳಿದ್ದಾರೆ.

ಅವರ ಪ್ರಕಾರ, ರೋಹಿತ್ ಶರ್ಮಾ ಹಾಗೂ ಕೊಹ್ಲಿ ಇಬ್ಬರೂ ಸಮಯಕ್ಕಿಂತ ಮೊದಲೇ ನಿವೃತ್ತರಾಗುವಂತಾಯಿತು. “ಬಿಸಿಸಿಐ ಆಂತರಿಕ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಆದರೆ ಇದರಿಂದಲೇ ಇವರಿಬ್ಬರೂ ಹಠಾತ್ ನಿವೃತ್ತಿ ಘೋಷಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಈಗ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. 2024ರ ಟಿ20 ವಿಶ್ವಕಪ್ ನಂತರ ಈ ಇಬ್ಬರೂ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸ ಅವರ ಏಕದಿನ ವೃತ್ತಿಜೀವನದ ಕೊನೆಯ ಪ್ರವಾಸವಾಗಬಹುದೆಂಬ ವದಂತಿಯೂ ಕೇಳಿಬರುತ್ತಿದೆ. ಆದರೆ ಈ ಕುರಿತು ಇನ್ನೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಭಾರತೀಯ ಕ್ರಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನೀಡಿದ ಕೊಡುಗೆ ಅಸಾಧಾರಣ. ಇವರ ಹಠಾತ್ ನಿವೃತ್ತಿ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಕರ್ಸನ್ ಘಾವ್ರಿಯ ಹೇಳಿಕೆಯಂತೆ ಬಿಸಿಸಿಐ ಆಂತರಿಕ ರಾಜಕೀಯವೇ ನಿಜವಾಗಿಯೂ ಕಾರಣವಾದರೆ, ಅದು ಭಾರತೀಯ ಕ್ರಿಕೆಟ್‌ಗೆ ದೊಡ್ಡ ಹಿನ್ನಡೆಯಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!