ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎಲ್ಲ ಬೆಲೆ ಹೆಚ್ಚಳವಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮತ್ತು ರಸ್ತೆ ಬದಿ ಪಾರ್ಕಿಂಗ್ ವೆಚ್ಚ ಸಂಗ್ರಹಿಸಲು ನಿರ್ಧರಿಸಿರುವ ಸರ್ಕಾರದ ನಡೆ ವಿರುದ್ಧ ನಾಗರಿಕರು ಸಹಿ ಅಭಿಯಾನ ಆರಂಭಿಸಿದ್ದಾರೆ.
ಬೆಂಗಳೂರು ನವನಿರ್ಮಾಣ ಪಕ್ಷ ಈ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದು, ಈಗಾಗಲೇ ಸುಮಾರು 1400 ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡು ಸಹಿ ಹಾಕಿದ್ದಾರೆ.
ಬೆಂಗಳೂರಿನ ವಿವಿಧ ಪ್ರದೇಶಗಳ 1,000 ಕ್ಕೂ ಹೆಚ್ಚು ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪರಿಚಯಿಸಿದ ಘನತ್ಯಾಜ್ಯ ನಿರ್ವಹಣಾ ಬಳಕೆದಾರ ಶುಲ್ಕ ಮತ್ತು ಖಾಸಗಿ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕದಂತಹ ಹೆಚ್ಚುವರಿ ತೆರಿಗೆಗಳನ್ನು ಪಾವತಿಸುವುದಿಲ್ಲ ಎಂದು ಆನ್ಲೈನ್ನಲ್ಲಿ ಪ್ರತಿಜ್ಞೆ ಮಾಡಿದ್ದಾರೆ.
ಹೀಗೆ ನಾಗರಿಕರರಿಂದ ಸಂಗ್ರಹಿಸುವ ಹಣವನ್ನು ಬಿಬಿಎಂಪಿ ಏನು ಮಾಡುತ್ತದೆ ಎಂಬುದರ ಕುರಿತು ಬಿಬಿಎಂಪಿ ಸ್ಪಷ್ಟನೆ ನೀಡಬೇಕು. ನಾಗರಿಕರಿಗೆ ದಂಡ ವಿಧಿಸುವ ಬದಲು ಬಿಬಿಎಂಪಿ ಜವಾಬ್ದಾರಿಯುತ ಪ್ರಯತ್ನಗಳನ್ನು ಬೆಂಬಲಿಸಬೇಕಲ್ಲವೇ? ಮತ್ತು ನಮ್ಮ ಸ್ವಂತ ಖಾಸಗಿ ಜಾಗದಲ್ಲಿ ವಾಹನ ನಿಲ್ಲಿಸಿಕೊಂಡರೆ ಇದಕ್ಕೆ ಪಾರ್ಕಿಂಗ್ ಶುಲ್ಕ ಏಕೆ? ಶೂನ್ಯ ಸಮಾಲೋಚನೆ ಮತ್ತು 100 ಪ್ರತಿಶತ ತೆರಿಗೆ ಹೇರಿಕೆಯೊಂದಿಗೆ ನೀವು ನಗರವನ್ನು ನಡೆಸಲು ಸಾಧ್ಯವಿಲ್ಲ ಎಂದು ನಾಗರಿಕರು ಗರಂ ಆಗಿದ್ದಾರೆ.